ರಾಮನಗರ: ಕಳೆದ ಕೆಲವು ದಿನಗಳಿಂದ ಪಿಎಸ್ಐ ಅಕ್ರಮದ ಸದ್ದು ಜೋರಾಗಿದೆ. ಸಿಐಡಿ ತನಿಖೆ ನಡೆಸುತ್ತಿದ್ದು, ಈಗಾಗಲೇ ಸಾಕಷ್ಟು ಜನರ ಬಂಧನವು ಆಗಿದೆ. ಇದೀಗ ಪಿಎಸ್ಐ ಹಗರಣದ ನಡುವೆ ಬಮೂಲ್ ಹಗರಣವೂ ಸದ್ದು ಮಾಡುತ್ತಿದೆ. ಈ ಸಂಬಂಧ ಸಂಸದ ಡಿ ಕೆ ಸುರೇಶ್ ದೂರು ನೀಡಿದ್ದಾರೆ.
ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರದ ಬಮೂಲ್ ನಲ್ಲೂ ಅಕ್ರಮದ ವಾಸನೆ ಬಡಿಯುತ್ತಿದೆ. 2021ರಲ್ಲಿ ನಡೆದ ಬಮೂಲ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದೆ. ಪರೀಕ್ಷೆ ನಡೆದ ಬಳಿಕ ಮೌಲ್ಯ ಮಾಪನ, ಫಲಿತಾಂಶದ ಹೊರೆ ಹೊತ್ತಿದ್ದ ಮೈಸೂರು ವಿವಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಮುಕ್ತ ವಿವಿ ಮೂಲಕ ಪರೀಕ್ಷೆ ನಡೆಸಲಾಗಿದೆ. ಮೌಲ್ಯಮಾಪನ, ಫಲಿತಾಂಶ ಪ್ರಕಟ ಮಾಡಲಾಗಿದೆ. ಆದರೆ ಈ ಪರೀಕ್ಷೆ ನಡೆಯುವ 30 ನಿಮಿಷಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಕೆಲ ಅಭ್ಯರ್ಥಿಗಳಿಂದ ನೇಮಕಾತಿಗೂ ಮುನ್ನವೇ ಒಡಂಬಡಿಕೆ ಮಾಡಿಸಿಕೊಂಡು, 15-20 ಲಕ್ಷ ಹಣ ತೆಗೆದುಕೊಳ್ಳಲಾಗಿದೆ. ನಿವೃತ್ತಿಗೆ 3 ತಿಂಗಳು ಇರುವಾಗಲೇ ಬಮೂಲ್ ಸಿಇಒ, ಸಂಸ್ಥೆ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಸಂಬಂಧ ಬಮೂಲ್ ವ್ಯವಸ್ಥಾಪಕ ನಿರ್ದೇಶಕರನ್ನು ಅಮಾನತು ಮಾಡಬೇಕೆಂದು ಮನವಿ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ಲಿಖಿತ ದೂರು ನೀಡಲಾಗಿದೆ. ಈಗಾಗಲೇ ಈ ಪ್ರಕರಣ ಸಂಬಂಧ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿಯನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದಾರೆ.