ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಸುಪ್ರೀಂ ಕೋರ್ಟ್ ನಿಂದ ಜಾಮೀನು ರದ್ದಾಗಿದೆ. ಹೀಗಾಗಿ ಏಳು ಜನ ಮತ್ತೆ ಜೈಲು ಪಾಲಾಗಿದ್ದಾರೆ. ಅದರಲ್ಲಿ ಅನುಕುಮಾರ್ ಕೂಡ ಜೈಲು ಪಾಲಾಗಲಿದ್ದಾರೆ. ಈ ಸ್ಥಿತಿ ಕಂಡು ಅನುಕುಮಾರ್ ತಾಯಿ ಕಣ್ಣೀರಾಕಿದ್ದಾರೆ. ದೇವರು ನಮಗೆ ನೆಮ್ಮದಿಯನ್ನೇ ಕೊಡಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಜೈಲಿಗೆ ಹೋದವನು ಬಂದನಲ್ಲ ಅಂತ ಆ ತಾಯಿ ನೆಮ್ಮದಿಯಾಗಿದ್ದರೆ ಇದೀಗ ಸುಪ್ರೀಂ ಕೋರ್ಟ್ ನಿರ್ಧಾರ ಆ ಹೆತ್ತ ತಾಯಿಗೆ ಮತ್ತೆ ಮಂಕಾಗುವಂತೆ ಮಾಡಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಜಯಮ್ಮ, ಜೈಲಿಗೆ ಹೋದ ಮಗ ಮತ್ತೆ ಬಂದನಲ್ಲ ಎಂಬ ನೆಮ್ಮದಿ ಇತ್ತು. ಮನೆಯಲ್ಲಿ ಕೂಲಿ ಮಾಡಿಕೊಂಡು ಚೆನ್ನಾಗಿ ಇದ್ವಿ. ಮತ್ತೆ ಈಗ ಅದೇ ಪರಿಸ್ಥಿತಿ ಬಂದಿದೆ. ಜಾಮೀನು ಪಡೆಯುವುದಕ್ಕೆ ಎಲ್ಲೆಲ್ಲೋ ಸಾಲ ಮಾಡಿ ಮಗನನ್ನು ಕರೆದುಕೊಂಡು ಬಂದ್ವಿ. ಮಾಡಿರುವ ಸಾಲವನ್ನ ಮಗ ಅನುಕುಮಾರ್ ತೀರಿಸುತ್ತಾನೆ ಎಂದುಕೊಂಡೆವು. ಈಗ ಮತ್ತೆ ಇದೇ ಸಂಕಷ್ಟ ಬಂದಿದೆ.
ಈ ರೀತಿಯಾದರೆ ನಾವೂ ಬದುಕುವುದು ಹೇಗೆ..? ನಾವೂ ನೋವು ಹೇಗೆ ಸುಧಾರಿಸಿಕೊಳ್ಳಬೇಕು..? ಮತ್ತೆ ಅದೇ ಕೊರಗು ನಮ್ಮನ್ನ ಕಾಡುತ್ತಿದೆ. ಬೆಳಗ್ಗೆ ಇದನ್ನು ಕೇಳಿ ಬೇಸರ ಆಯ್ತು. ಶ್ಯೂರಿಟಿಗೆ ಸಾಕಷ್ಟು ಓಡಾಡಿ ಬೇಲ್ ತಂದಿದ್ದೇವೆ. ನಮ್ಮ ಕಷ್ಟಕ್ಕೆ ಯಾರೂ ಆಗಲೇ ಇಲ್ಲ. ದೇವರು ಹೀಗೆ ವನವಾಸ ಕೊಟ್ಟರೇ ಏನು ಮಾಡುವುದು. ಮಳೆ ಬಂದರೆ ಮನೆ ಸೋರುತ್ತದೆ. ಹೇಗೋ ಮಾಡಿ ಮನೆ ಕಟ್ಟೋಣಾ, ಸೀಟು ಹಾಕೊಂಡು ಇರೋಣಾ ಅಂತ ಅಂದುಕೊಂಡಿದ್ದೆವು. ಆದರೆ ದೇವರು ನಮಗೆ ನೆಮ್ಮದಿನೇ ಕೊಡಲಿಲ್ಲ. ಏನು ಮಾಡುವುದು. ಇನ್ನೇನು ಇಲ್ಲ ದೇವರ ಮೇಲೆ ಭಾರ ಹಾಕಿ ಬದುಕುವುದು ಅಷ್ಟೇ ಎಂದಿದ್ದಾರೆ.





