ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್ : ಮೊ 78998 64552
ಚಿತ್ರದುರ್ಗ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಜಿಲ್ಲಾ ನೀರಾವರಿ ಅನುಷ್ಟಾನ ಹೋರಾಟ ಸಮಿತಿಯಿಂದ ಕಾತ್ರಾಳು ಕೆರೆಯಲ್ಲಿ ಶುಕ್ರವಾರ ಬಾಗಿನ ಅರ್ಪಿಸಲಾಯಿತು.
ಜಿಲ್ಲಾ ನೀರಾವರಿ ಅನುಷ್ಟಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಬಾಗಿನ ಸಮರ್ಪಣೆಯಲ್ಲಿ ಭಾಗವಹಿಸಿ ಮಾತನಾಡುತ್ತ ಚಿಕ್ಕಮಂಗಳೂರು ಜಿಲ್ಲೆ ಅಬ್ಬಿನಹೊಳಲು ಬಳಿ 1.90 ಕಿ.ಮೀ.ನಷ್ಟು ಭೂಮಿ ಬಿಟ್ಟುಕೊಡಲು ರೈತರು ತಕರಾರು ಮಾಡುತ್ತಿರುವುದರಿಂದ ಯೋಜನೆಯಲ್ಲಿ ವಿಳಂಭವಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಸಮಸ್ಯೆ ಬಗೆಹರಿಸುವುದಕ್ಕಾಗಿ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಮತ್ತೊಮ್ಮೆ ಎಲ್ಲರೂ ಸ್ವಾಮೀಜಿಗಳ ಬಳಿ ಹೋಗಿ ನಿವೇದಿಸಿಕೊಳ್ಳೋಣ ಎಂದು ಹೇಳಿದರು.
ನಾಡಿನಾದ್ಯಂತ ಎಲ್ಲಾ ಕಡೆ ವಿಪರೀತ ಮಳೆಯಾಗುತ್ತಿರುವುದರಿಂದ ಚಿತ್ರದುರ್ಗ ಜಿಲ್ಲೆಯಲ್ಲಿರುವ ಬಹುತೇಕ ಕೆರೆಗಳು ಭರ್ತಿಯಾಗಿವೆ. ಮಳೆಗಾಲಕ್ಕೂ ಮುನ್ನಾ ಎಲ್ಲಾ ಕೆರೆಗಳ ಹೂಳು ತೆಗೆಸಿದರೆ ಹೆಚ್ಚಿನ ನೀರು ಸಂಗ್ರಹವಾಗಿ ರೈತರ ಬೆಳೆಗಳಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೆರೆಗಳ ಏರಿಗಳನ್ನು ದುರಸ್ತಿಪಡಿಸಬೇಕೆಂದು ಮನವಿ ಮಾಡಿದರು.
ಕಾತ್ರಾಳು ಕೆರೆ ಅನೇಕ ವರ್ಷಗಳ ನಂತರ ತುಂಬಿ ಹರಿಯುತ್ತಿರುವುದು ಈ ಭಾಗದ ರೈತರಲ್ಲಿ ಸಂತಸವನ್ನುಂಟು ಮಾಡಿದೆ. ಅದೇ ರೀತಿ ಭದ್ರಾಮೇಲ್ದಂಡೆ ಯೋಜನೆ ಶೀಘ್ರವೇ ಜಾರಿಯಾಗಿ ಜಿಲ್ಲೆಗೆ ನೀರು ಹರಿದು ಬರಲಿ ಎಂದು ಆಶಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ನೀರಾವರಿ ಅನುಷ್ಟಾನ ಹೋರಾಟ ಸಮಿತಿ ಅಧ್ಯಕ್ಷ ಟಿ.ನುಲೇನೂರು ಶಂಕರಪ್ಪ ಮಾತನಾಡುತ್ತ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯನ್ನು ನೀರಾವರಿ ಪ್ರದೇಶವನ್ನಾಗಿ ಮಾಡಲು ರೈತರು ಹಾಗೂ ವಿವಿಧ ಸಂಘಟನೆಗಳು ನಿರಂತರ ಹೋರಾಟ ನಡೆಸಿದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಿದೆ.
ಜಿಲ್ಲೆಯಲ್ಲಿ ಬಹಳಷ್ಟು ಕೆರೆಗಳು ಒತ್ತುವರಿಯಾಗಿದ್ದು, ಹೈಕೋರ್ಟ್ ಆದೇಶದಂತೆ ತೆರವುಗೊಳಿಸಿ ಏರಿಗಳನ್ನು ರಿಪೇರಿ ಮಾಡಿಸಿ ನೀರು ಪೋಲಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಇದರಿಂದ ರೈತರ ಕೃಷಿಗೆ ಉಪಯೋಗವಾಗಲಿದೆ. ಅಬ್ಬಿನಹೊಳಲು ಬಳಿ 1.90 ಕಿ.ಮೀ.ನಷ್ಟು ಭೂಮಿಯನ್ನು ನೀರಾವರಿ ಯೋಜನೆಗೆ ಬಿಟ್ಟುಕೊಡಲು ತಕರಾರು ಮಾಡುತ್ತಿರುವ ಆ ಭಾಗದ ರೈತರ ಮನವೊಲಿಸಿದರೆ ಬೇಗನೆ ಜಿಲ್ಲೆಗೆ ನೀರು ಹರಿದು ಬರಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಮಾತನಾಡಿ ಅನೇಕ ವರ್ಷಗಳ ನಂತರ ಕಾತ್ರಾಳು ಕೆರೆ ಎರಡು ಕಡೆ ಕೋಡಿ ಬಿದ್ದು, ನೀರು ಹರಿದು ಹೋಗುತ್ತಿದೆ. ಬಯಲುಸೀಮೆ ಚಿತ್ರದುರ್ಗದ ಸುತ್ತಮುತ್ತ ಎಲ್ಲಾ ಕೆರೆಗಳು ಭರ್ತಿಯಾಗಿರುವುದರಿಂದ ಏರಿಗಳನ್ನು ಭದ್ರಪಡಿಸಿ ನೀರು ವ್ಯರ್ಥವಾಗಿ ಹರಿದು ಹೋಗದಂತೆ ನೋಡಿಕೊಳ್ಳುವುದು ಆಳುವ ಸರ್ಕಾರಗಳ ಕರ್ತವ್ಯ ಎಂದು ಒತ್ತಾಯಿಸಿದರು.
ರೈತ ಮುಖಂಡರುಗಳಾದ ನಾಗರಾಜ್ ಮುದ್ದಾಪುರ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಧನಂಜಯ ಹಂಪಯ್ಯನಮಾಳಿಗೆ, ಕಲ್ಲೇನಹಳ್ಳಿ ಕುಮಾರ್, ಎಮ್ಮೆಹಟ್ಟಿ ಮೋಹನ್, ಕೋಗುಂಡೆ ರವಿ, ಶಿವನಕೆರೆ ಮಂಜಣ್ಣ, ನಿವೃತ್ತ ಪ್ರಾಚಾರ್ಯರಾದ ಅಶೋಕುಮಾರ್ ಸಂಗೇನಹಳ್ಳಿ, ನಿವೃತ್ತ ದೈಹಿಕ ಶಿಕ್ಷಕ ಕೊಟ್ರೇಶಿ, ಶ್ರೀಮತಿ ಸುಮಂಗಲ, ಜ್ಯೋತಿ ಶಂಕರಮೂರ್ತಿ ಸೇರಿದಂತೆ ಇನ್ನು ಅನೇಕರು ಬಾಗಿನ ಸಮರ್ಪಣೆಯಲ್ಲಿ ಪಾಲ್ಗೊಂಡಿದ್ದರು.