ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 12 : ಜ್ಯೋತಿಬಾ ಪುಲೆ ಎಲ್ಲ ವರ್ಗಗಳ ಐಕಾನ್ ಆಗಿದ್ದು, ಶೂದ್ರ ವರ್ಗ ಅವರ ಚಿಂತನೆಗಳನ್ನು ಆದರ್ಶವಾಗಿ ತೆಗೆದುಕೊಳ್ಳಬೇಕಿದೆ. ಪುಲೆ ದಂಪತಿಗಳು ಬಾಬಾಸಾಹೇಬರ ತಂದೆ ರಾಮಜಿ ಸಕ್ಪಾಲ್ ಸತ್ಯಶೋಧಕ ಸಮಾಜದ ಒಡನಾಡಿಗಳಾಗಿದ್ದರು. ಕೌಟುಂಬಿಕವಾಗಿಯೇ ಪುಲೆ ದಂಪತಿಗಳ ಸಾಧನೆಯನ್ನು ಕೇಳಿ ಬೆಳೆದಿದ್ದರು. ಸತ್ಯಶೋಧಕ ಸಮಾಜದ ಸದಸ್ಯರ ಪರವಾಗಿ ನ್ಯಾಯವಾದಿಯಾಗಿ ವಾದಿಸಿದ್ದರು. ಬುದ್ಧ ಸ್ತ್ರೀಯರಿಗೆ ಬೌದ್ಧ ಧಮ್ಮದಲ್ಲಿ ಅವಕಾಶ ಕೊಟ್ಟ ಹಾಗೆ ಪುಲೆಯವರು ಸ್ತ್ರೀಯರಿಗೆ ಶಿಕ್ಷಣ ಹಾಗೂ ಉದ್ಯೋಗದ ಅವಕಾಶ ನೀಡಿದರು. ಈ ಹಿನ್ನೆಲೆಯಲ್ಲಿ ಎಲ್ಲ ವರ್ಗಗಳ ಐಕಾನ್ ಆಗಿದ್ದಾರೆ. ಅಲ್ಲದೇ ಪುಲೆಯ ವೈಚಾರಿಕ ನಿಲುವು ಶೋಷಿತ ಸಮುದಾಯಗಳ ಬಿಡುಗಡೆ ಬಯಸಿದ ಕಾರಣ ಬಾಬಾಸಾಹೇಬರು ಪುಲೆಯನ್ನು ಗುರುವಾಗಿ ಸ್ವೀಕರಿಸಿದರು ಎಂದು ಚಿಂತಕ ಶ್ರೀನಿವಾಸರಾಜು ದೊಡ್ಡೇರಿ ಹೇಳಿದರು.

ಅಂಬೇಡ್ಕರ್ ವಿಚಾರ ವೇದಿಕೆ(ರಿ), ಜಂಬೂದ್ವೀಪ ಕರ್ನಾಟಕ, ಚಿತ್ರದುರ್ಗ ಇವರ ಸಹಯೋಗದಲ್ಲಿ ಮಹಾತ್ಮ ಫುಲೆ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಲಾದ ಮಹಾತ್ಮ ಜ್ಯೋತಿಬಾ ಫುಲೆ ಅವರ 199 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಣವು ಮಾತ್ರವೇ ತಳಸಮುದಾಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವಿಸಬಲ್ಲ ಸಾಧನವಾಗಿದ್ದು ಅದು ಎಲ್ಲಾ ಜನವರ್ಗಗಳಿಗೆ ಕೈದೀವಿಗೆಯಾಗಬೇಕಿದೆ ಎಂದೂ ಹೇಳಿದರು. ಆ ಕಾಲದ ಎಲ್ಲ ಸ್ಥಿತ್ಯಂತರದ ಪರಿಸ್ಥಿತಿಗಳನ್ನು ಮೀರಿ ಅವರು ಪುಣೆ ಪ್ರಾಂತ್ಯದಲ್ಲಿ ಮಹಿಳಾ ಶಿಕ್ಷಣ ಮತ್ತು ಆತ್ಮ ಗೌರವದ ಬದುಕಿಗೆ ನಾಂದಿ ಹಾಡಿದ್ದಾರೆ. ಸಂವಿಧಾನದ ಆಶಯಗಳಾದ ಸಾರ್ವತ್ರಿಕ ಶಿಕ್ಷಣ ಇವರ ಅವಿರತ ಹೋರಾಟದ ಫಲಶೃತಿಯ ಮುಂದುವರೆದ ಭಾಗವಾಗಿದೆ ಎಂದು ಸ್ಮರಿಸಿದರು.
ಕವಿ ಶಿವಶಂಕರ ಸೀಗೆಹಟ್ಟಿ ಅವರು ಮಹಾತ್ಮ ಫುಲೆ ಅವರನ್ನು ಅಂಬೇಡ್ಕರ್ ಅವರು ಮೂರನೇ ಗುರುವೆಂದು ಸ್ವೀಕರಿಸಿದ್ದು ಚಾರಿತ್ರಿಕ ಸಂಗತಿಯಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಇವರ ಕೊಡುಗೆಯನ್ನು ಇನ್ನಷ್ಟು ಸ್ಮರಿಸುವ ಕೆಲಸವಾಗಬೇಕಿದೆ. ಕಾಲೇಜು ಹಂತದಲ್ಲಿ ಇವರ ಬಗೆಗೆ ಪಠ್ಯಗಳು ರೂಪಿತವಾಗಿ ಜಾಗೃತಿ ಮೂಡಿಸುವ ಕೆಲವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರಾದ ಡಾ.ಪ್ರದೀಪ ಅವರು ಭಾರತದ ಶೈಕ್ಷಣಿಕ ಮೈಲುಗಲ್ಲುಗಳಲ್ಲಿ ನೆನೆಯಬೇಕಾದ ಚರಿತ್ರಾರ್ಹರು ಮತ್ತು ಗ್ರಹಿಸಿಕೊಳ್ಳಬೇಕಾದ ಸಂಗತಿಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವೇದಾಂತ ಏಳಂಜಿ ಪುಲೆ ಮತ್ತು ಬಾಬಾಸಾಹೇಬರು ಭಾರತದ ಶೋಷಿತ ಸಮುದಾಯಗಳಿಗೆ ಮಾರ್ಗದರ್ಶಕರಾಗಿ ಸದಾ ಮುನ್ನೆಡೆಸುವವರಾಗಿದ್ದಾರೆ ಎಂದರು. ಜಂಬೂದ್ವೀಪ ಕರ್ನಾಟಕದ ಕಾರ್ಯದರ್ಶಿ ಸಿದ್ದೇಶ್ ನಿಕಟಪೂರ್ವ ಅಧ್ಯಕ್ಷರಾದ ರಾಮಣ್ಣ ಬಾಲೇನಹಳ್ಳಿ, ವಕೀಲರಾದ ವಿಶ್ವಾನಂದ ವದ್ದೀಕೆರೆ, ವಿಚಾರ ವೇದಿಕೆಯ ಆರ್.ಮಂಜುನಾಥ್ ಡಾ. ಕುಮಾರ್, ಭೀಮರಾಜು, ಶ್ರೀನಿವಾಸ್ , ಹನುಮಂತಪ್ಪ ದಡಗೂರು, ಪ್ರಕಾಶ ಯಾದಲಗಟ್ಟೆ, ಪುರುಷೋತ್ತಮ, ಬುದ್ಧನಗರ ರಾಜು ಮತ್ತಿತರರು ಉಪಸ್ಥಿತರಿದ್ದರು.














