ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಹೊಳಲ್ಕೆರೆ, (ಜು.16) : ಕ್ಷೇತ್ರಾದ್ಯಂತ ಎಲ್ಲಾ ಗ್ರಾಮಗಳಲ್ಲೂ ಗುಣಮಟ್ಟದ ರಸ್ತೆ ಮಾಡಿಸಿರುವ ಶಾಸಕ ರಾಜ್ಯದಲ್ಲಿ ಯಾರಾದರೂ ಇದ್ದರೇ ಅದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಗುಣಗಾನ ಮಾಡಿದರು.
ಪಟ್ಟಣದಲ್ಲಿರುವ ಸಂವಿಧಾನ ಸೌಧದಲ್ಲಿ ತಾಲ್ಲೂಕು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಸಕ ಚಂದ್ರಪ್ಪ ಮತ್ತು ಅವರ ಪತ್ನಿ ಚಂದ್ರಕಲಾ ಪುತ್ರ ರಘುಚಂದನ್ ಇವರುಗಳು ಕೂಡ ಜನ ಸೇವೆಗೆ ನಿಂತಿದ್ದಾರೆ. ತಾಲ್ಲೂಕಿನಾದ್ಯಂತ ವಸತಿ ಶಾಲೆ, ಮುರಾರ್ಜಿ ದೇಸಾಯಿ ಶಾಲೆ, ಬಸ್ ನಿಲ್ದಾಣ ಇವೆಲ್ಲವನ್ನು ಶಾಸಕ ಚಂದ್ರಪ್ಪ ಗುಣಮಟ್ಟದಿಂದ ನಿರ್ಮಿಸಿದ್ದಾರೆ. ಹಾಗಾಗಿ ಮೊದಲನೇ ಬಾರಿ ಭರಮಸಾಗರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ರಸ್ತೆ ರಾಜ ಎಂಬ ಬಿರುದು ಪಡೆದುಕೊಂಡರು.
ಚಂದ್ರಪ್ಪ ಮಾಡಿರುವ ಕೆಲಸಗಳು ಎಲ್ಲಾ ಕಡೆ ಕಣ್ಣಿಗೆ ಕಾಣುತ್ತಿದೆ. ಆದರೂ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಿಸಿದ 5 ಗ್ಯಾರಂಟಿಗಳಿಗೆ ಮನಸೋತು ರಾಜ್ಯದಿಂದ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ನೀಡಿದ್ದರಿಂದ ನಮ್ಮ ಪಕ್ಷ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಹೇಳಿದರು.
ಶಿಕಾರಿಪುರ ಶಾಸಕ ಬಿ.ಜೆ.ಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಶಾಸಕ ಎಂ.ಚಂದ್ರಪ್ಪ ನಾಲ್ಕವರೆ ಸಾವಿರ ಕೋಟಿ ರೂಗಳ ಅನುದಾನ ತಂದು ಹೊಳಲ್ಕೆರೆ ಕ್ಷೇತ್ರದ ಇತಿಹಾಸದಲ್ಲಿಯೇ ಯಾರು ಮಾಡದಂತಹ ಅಭಿವೃದ್ದಿಯನ್ನು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಂದು ಯಾರು ನಿರೀಕ್ಷಿಸಿರಲಿಲ್ಲ. ಚುನಾವಣಾ ಪೂರ್ವದಲ್ಲಿಯೇ 5 ಗ್ಯಾರಂಟಿಗಳನ್ನು ಘೋಷಿಸಿ ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದಿದೆ. ಆದರೆ ಅಧಿಕಾರ ಶಾಶ್ವತವಲ್ಲ ಎನ್ನುವುದನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕೆಂದು ಕುಟುಕಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡಿಸುವಾಗ ದೇಶದ ಪ್ರಧಾನಿ ಮೋದಿರವರನ್ನು ಟೀಕಿಸಿದ್ದು, ಅವರಿಗೆ ಶೋಬೆಯಲ್ಲ. ಜಗತ್ತಿನ 26 ರಾಷ್ಟ್ರಗಳು ಪ್ರಧಾನಿ ಮೋದಿಯನ್ನು ಗೌರವಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ದೇಶದ 130 ಕೋಟಿ ಜನರಿಗೆ ಉಚಿತ ಲಸಿಕೆ ಹಾಗೂ ಅಕ್ಕಿ ನೀಡಿ ಕಾಪಾಡಿದ್ದಾರೆ. ಈ ದೇಶದ ಉಜ್ವಲ ಭವಿಷ್ಯ ಮೋದಿರವರ ಅಭಿವೃಧ್ದಿ ಮೇಲೆ ನಿಂತಿದೆ. ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ವರ್ಗದವರ ಹಿತ ಕಾಪಾಡಿದ್ದಾರೆಂದು ಹೇಳಿದರು.
ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ನನ್ನ ಕರ್ತವ್ಯ ಮತ್ತು ಜವಾಬ್ದಾರಿ ಎಂದು ತಿಳಿದು ಹಗಲು ರಾತ್ರಿ ಪ್ರ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ದಿಗೆ ಸಹಕರಿಸಿದ್ದಾರೆ. ಅದೇ ರೀತಿ ಬೊಮ್ಮಾಯಿ ರವರು ಮುಖ್ಯಮಂತ್ರಿಯಾಗಿದ್ದಲೂ ನನಗೆ ಅನುದಾನ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ 5 ಗ್ಯಾರೆಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದೆ. ಆದರೆ ಬಹಳ ಜನ ಅಧಿಕಾರದಲ್ಲಿ ಉಳಿಯುವುದಿಲ್ಲ. ಕಾರ್ಯಕರ್ತರು ಯಾರು ಎದೆಗುಂದುವುದು ಬೇಡ ಎಂದು ಧೈರ್ಯ ತುಂಬಿದರು.
ಕ್ಷೇತ್ರದಲ್ಲಿ ಎಲ್ಲಿಯೂ ಜಾತಿ ನಿಂದನೆ, ಗದ್ದಲ ಗಲಾಟೆ ಇಲ್ಲದಂತೆ ಎಲ್ಲರನ್ನು ಸಮಾನವಾಗಿ ಕಂಡಿದ್ದೇನು. ನಮ್ಮ ನಿಮ್ಮ ಸಂಬಂಧ ಕೊನೆಯುಸಿರಿರುವತನಕ ಗಟ್ಟಿಯಾಗಿರುತ್ತದೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಿ ಹೊಸ ಕೆಲಸಗಳನ್ನು ಆರಂಭಿಸೋಣ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಮಂಜುನಾಥ, ಲಿಂಗಮೂರ್ತಿ, ಈಶ್ವರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು, ಶ್ರೀಮತಿ ಸುಮ ಲಿಂಗರಾಜ್, ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್, ಶ್ರೀಮತಿ ಚಂದ್ರಕಲಾ ಚಂದ್ರಪ್ಪ ಬಿ.ಜೆ.ಪಿ. ಯುವ ಮುಖಂಡರುಗಳಾದ ಎಂ.ಸಿ.ರಘುಚಂದನ್, ಜಿ.ಎಸ್.ಅನಿತ್‍ಕುಮಾರ್, ತಾಲ್ಲೂಕು ವೀರಶೈವ ಲಿಂಗಾಯತ ಸಮಾಜದ ಮುಖಂಡರುಗಳು ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದರು.