ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಫೆ. 05 : ಕ್ಯಾನ್ಸರ್ ಇರುವುದನ್ನು ಬೇಗ ಪತ್ತೆ ಮಾಡಿದರೆ ಅದನ್ನು ತಡೆಯುವುದು ಸುಲಭ ಆದರೆ ಸಮಯ ಮೀರಿ ಹೋದಾಗ ವೈದ್ಯರ ಚಿಕಿತ್ಸೆ ನಾಟುವುದು ಕಷ್ಟವಾಗುತ್ತದೆ. ಮಹಿಳೆಗೆ ಸ್ತನದ ಕ್ಯಾನ್ಸರ್ ಮತ್ತು ಸರ್ವೈಕಲ್ ಕ್ಯಾನ್ಸರ್ ತೀವ್ರವಾಗಿ ಕಾಡುತ್ತಿವೆ ಇದರ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ನಮ್ಮೆಲ್ಲರ ಹೊಣೆ ಎಂದು ಬಸವೇಶ್ವರ ಮೆಡಿಕಲ್ ಕಾಲೇಜಿನ ಡಾ. ಅಶ್ವಿನಿ ಜಿ.ಎಸ್. ತಿಳಿಸಿದರು.
ನಗರದ ಎಸ್‍ಜೆಎಂಫಾರ್ಮಸಿ ಕಾಲೇಜಿನಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆ ಮೂರು ವರ್ಷದ ಮಟ್ಟಿಗೆ ಕ್ಯಾನ್ಸರ್ ಅನ್ನು ತಡೆಯಲು ಮತ್ತು ನಿರ್ವಹಣೆಗಾಗಿ ವೇದವಾಕ್ಯವನ್ನು ಸೂಚಿಸಿದೆ “ಯುನೈಟೆಡ್ ಬೈ ಯೂನಿಕ್” ಅಂದರೆ ಒಬ್ಬ ರೋಗಿಗಿಂತ ಇನ್ನೊಬ್ಬ ರೋಗಿಯು ವಿಭಿನ್ನವಾಗಿ ರೋಗ ಚಿಕಿತ್ಸಾ ನಿರ್ವಹಣೆ ಮಾಡಬೇಕಾಗುತ್ತದೆ ಮತ್ತ ರೋಗ ತಡೆಯಲು ಕ್ಯಾನ್ಸರ್ ಬಗ್ಗೆ ಅರಿವು ಮತ್ತು ಜಾಗೃತಿಯನ್ನು ಎಲ್ಲರೂ ಹೊಂದುವುದು ಮತ್ತು ಇತರರಿಗೆ ತಿಳಿಸುವುದು ಪ್ರತಿಯೊಬ್ಬರ ಹೊಣೆ ಎಂದು ಹೇಳಿದರು.
ಕ್ಯಾನ್ಸರ್ ರೋಗ ಎರಡನೇ ಮಹಾಮಾರಿ ರೋಗವಾಗಿ ಹೊರಹೊಮ್ಮುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಭಾರತದಲ್ಲಿ ಸರಿಸುಮಾರು ಗರ್ಭಕಂಠದ ಕ್ಯಾನ್ಸರ್‍ಗೆ (ಸರ್ವೈಕಲ್ ಕ್ಯಾನ್ಸರ್) ವರ್ಷಕ್ಕೆ 67,000 ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ, ಸರಾಸರಿ ಪ್ರತಿ ಎಂಟು ನಿಮಿಷಕ್ಕೆ ಒಬ್ಬ ಮಹಿಳೆ ಈ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾಳೆ. ಇದಕ್ಕೆ ಕಾರಣ ಊPಗಿ ವೈರಾಣು. ರೋಗಲಕ್ಷಣಗಳು ಇದ್ದರೂ ವೈದ್ಯರ ಸಲಹೆ ಮತ್ತು ಸೂಚನೆಗೆ ಬರದೇ ಇರುವುದು. ಕ್ಯಾನ್ಸರ್ ಬಾರದಂತೆ ತಡೆಯಲು ಲಸಿಕೆಗಳು ಇದ್ದರು ತೆಗೆದುಕೊಳ್ಳದೆ ಇರುವುದು ಹಾಗೂ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸಲು ಆಗದೆ ಹೋಗುವುದು ಸರ್ವೇಸಾಮಾನ್ಯವಾಗಿದೆ. ಗರ್ಭಕಂಠದಲ್ಲಿ ಮತ್ತು ಸ್ತನಗಳಲ್ಲಿ ಯಾರಿಗಾದರೂ ತೊಂದರೆಗಳು ಕಂಡುಬಂದಲ್ಲಿ ಹೇಳಿಕೊಳ್ಳಲು ಮುಜುಗರ ಪಡಬೇಡಿ ಎಂದು ಕಿವಿಮಾತು ಹೇಳಿದರು. ಹಾಗೂ ಕ್ಯಾನ್ಸರ್ ರೋಗಿಗಳಿಗೆ ನೋವಿನ ಔಷಧಿಯನ್ನು ನಿರ್ವಹಣೆಗಾಗಿ ಬಳಸುವ ಚಿಕಿತ್ಸಾ ಪದ್ಧತಿಗಳ ಅರಿವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಎಸ್ ಜೆ ಎಂ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಟಿಎಸ್ ನಾಗರಾಜ್, ಫಾರ್ಮ ಡಿ ವಿದ್ಯಾರ್ಥಿಗಳು ಔಷಧ ವಿಭಾಗದ ಮುಖ್ಯಸ್ಥರಾದ ಡಾ ಯೋಗಾನಂದ, ಡಾ ಸ್ನೇಹಲತಾ, ಡಾ ಬಸವರಾಜ ಹರ್ತಿ, ಡಾ ನಟರಾಜ್ ಹಾಗೂ ಡಾ ಅಬೂಬಕರ್ ಸಿದಿಕ್, ಡಾ ಅರ್ಪಿತ, ಡಾ ಸೌಮ್ಯ, ಅಕ್ಕಮ್ಮ, ಶರತ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಕ್ಯಾನ್ಸರ್ ದಿನದ ಅಂಗವಾಗಿ ಕ್ಯಾನ್ಸರ್‍ನ ಅರಿವು ಮೂಡಿಸಲು ಪೋಸ್ಟರ್ ಸ್ಪರ್ಧೆಯನ್ನು ಹಾಗೂ ಕ್ವಿಜ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.