ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ಜೂ.11): ಶಿಕ್ಷಣದ ಜೊತೆ ಮಕ್ಕಳಲ್ಲಿ ದೇಶಭಕ್ತಿ, ದೇಶಪ್ರೇಮ ಮೂಡಿಸಬೇಕಿದೆ ಎಂದು ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಎನ್.ಕಾಶಿವಿಶ್ವನಾಥಶೆಟ್ಟಿ ಹೇಳಿದರು.
ತ್ಯಾಗರಾಜ ಬೀದಿಯಲ್ಲಿರುವ ಆರ್ಯವೈಶ್ಯ ವಿದ್ಯಾಭಿವೃದ್ದಿ ಸಂಘ(ವಾಸವಿ ಹಾಸ್ಟೆಲ್) ಗೆ 79 ವರ್ಷಗಳಾಗಿರುವುದರಿಂದ ಶುಕ್ರವಾರದಿಂದ ಆರಂಭಗೊಂಡಿರುವ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ವಾಸವಿ ಮಹಲ್‍ನಲ್ಲಿ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಾಗಲಿ ಪ್ರಾಮಾಣಿಕವಾಗಿದ್ದು, ಒಳ್ಳೆಯ ಕೆಲಸ ಮಾಡಿದರೆ ಅಧಿಕಾರ ಹುಡುಕಿಕೊಂಡು ಬರುತ್ತದೆ. ಹಣಕಾಸು ವಿಚಾರದಲ್ಲಿ ಪಾರದರ್ಶಕವಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಟೀಕೆ, ನಿಂದನೆ, ಅಪವಾದಗಳನ್ನು ಎದುರಿಸಬೇಕಾಗುತ್ತದೆ. ಆರ್ಯವೈಶ್ಯ ಸಂಘದಲ್ಲಿ 21 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ವಿದ್ಯಾರ್ಥಿಗಳು ಆಕರ್ಷಣೆಗೆ ಬಲಿಯಾಗದೆ ಶಿಕ್ಷಣದ ಕಡೆ ಗಮನ ಕೊಡಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯ ಹರೀಶ್ ಮಾತನಾಡಿ ಆರ್ಯವೈಶ್ಯ ಸಂಘವೆಂದರೆ ಸಂಸ್ಕಾರ, ಸಂಸ್ಕøತಿಗೆ ಹೆಸರುವಾಸಿಯಾದುದು. ಆರ್ಯವೈಶ್ಯ ಸಮಾಜ ಇನ್ನು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿ ಆರ್ಯವೈಶ್ಯ ವಿದ್ಯಾಭಿವೃದ್ದಿ ಸಂಘದಲ್ಲಿ ಬೆಳೆದರೆ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಕಲಿಯುತ್ತಾರೆ ಎಂದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾದ ನಿರ್ದೇಶಕ ಕೆ.ವಿ.ಅಮರೀಶ್ ಮಾತನಾಡಿ ಆರ್ಯವೈಶ್ಯ ವಿದ್ಯಾರ್ಥಿಗಳ ಶಿಕ್ಷಣದ ಕಡೆ ಹೆಚ್ಚಿನ ಒತ್ತು ಕೊಡಬೇಕೆಂಬ ಉದ್ದೇಶದಿಂದ ಎಲ್ಲೆಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ಇದೆಯೋ ಅಲ್ಲೆಲ್ಲಾ ಹಾಸ್ಟೆಲ್‍ಗಳನ್ನು ತೆರೆಯಲಾಗುವುದು.
ಮೈಸೂರಿನಲ್ಲಿ ಹಾಸ್ಟೆಲ್ ನಿರ್ಮಾಣವಾಗುತ್ತಿದ್ದು, ನಮ್ಮ ಸಮಾಜಕ್ಕೆ ಸರ್ಕಾರದಿಂದ ಯಾವುದೇ ಸೌಲತ್ತುಗಳು ಸಿಗುತ್ತಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಹದಿನೈದು ವಿದ್ಯಾರ್ಥಿಗಳಿಗೆ ಎಜುಕೇಷನ್ ಲೋನ್ ನೀಡಲಾಗಿದೆ. ಒಂದು ಕೋಟಿ 25 ಲಕ್ಷ ರೂ.ವೆಚ್ಚದಲ್ಲಿ ಲ್ಯಾಪ್‍ಟ್ಯಾಪ್‍ಗಳನ್ನು ಕೊಟ್ಟಿದ್ದೇವೆ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದರೆ ಆರ್ಯವೈಶ್ಯ ವಿದ್ಯಾರ್ಥಿಗಳನ್ನು ಮೇಲಕ್ಕೆತ್ತಬಹುದು ಎಂದು ಸಲಹೆ ನೀಡಿದರು.
ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಸುಧಾ ನಾಗರಾಜ್ ಮಾತನಾಡಿ ಮಕ್ಕಳು ಚೆನ್ನಾಗಿ ಓದಿ ಆರ್ಯವೈಶ್ಯ ಸಂಘದ ಹಾಸ್ಟಲ್ ಹಾಗೂ ಊರಿಗೆ ಕೀರ್ತಿ ತನ್ನಿ ಎಂದು ಹೇಳಿದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ನಿರ್ದೇಶಕ ಬಿ.ವಿ.ಲವಕುಮಾರ್ ಮಾತನಾಡುತ್ತ ಆರ್ಯವೈಶ್ ಸಂಘದ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಗಳಿಗೆ ಹೇಳಿಕೊಡುವ ಪ್ರಾರ್ಥನೆಯಿಂದ ಜೀವನದಲ್ಲಿ ಶಿಸ್ತುಬದ್ದರಾಗಿರಲು ನೆರವಾಗಲಿದೆ. ಶಿಸ್ತಿಗೆ ಅಷ್ಟೊಂದು ಮಹತ್ವವಿದೆ ಎಂದರು.
ಆರ್ಯವೈಶ್ಯ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಡಾ.ಹೆಚ್.ಎನ್.ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಆರ್ಯವೈಶ್ಯ ವಿದ್ಯಾಭಿವೃದ್ದಿ ಸಂಘದ ನಿರ್ದೇಶಕರುಗಳಾದ ಪಿ.ಎಲ್.ರಮೇಶ್‍ಬಾಬು, ವೈ.ಶಂಕರನಾಥಶೆಟ್ಟಿ, ಆರ್ಯವೈಶ್ಯ ವಿದ್ಯಾಭಿವೃದ್ದಿ ಸಂಘದ ಮಾಜಿ ಅಧ್ಯಕ್ಷ ಪ್ರೊ.ಟಿ.ವಿ.ಸುರೇಶ್‍ಗುಪ್ತ ವೇದಿಕೆಯಲ್ಲಿದ್ದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್ ಸ್ಮರಣ ಸಂಚಿಕೆ ರಕ್ಷಾಪುಟ ಬಿಡುಗಡೆಗೊಳಿಸಿದರು.