ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಜ.03): ಐದು ಸಾವಿರ ರೂ.ನಿಂದ ಹಿಡಿದು ಹದಿನೈದು ಸಾವಿರ ರೂ.ಗಳವರೆಗೆ ದಂಡ ಹಾಕುತ್ತಿರುವ ಆರ್.ಟಿ.ಓ. ಹಾಗೂ ಸಂಚಾರಿ ಪೊಲೀಸರ ವಿರುದ್ದ ಆಟೋ ಚಾಲಕರು ಹಾಗೂ ಮಾಲೀಕರುಗಳು ಒನಕೆ ಓಬವ್ವ ಸರ್ಕಲ್ನಲ್ಲಿ ಮಂಗಳವಾರ ದಿಢೀರನೆ ಪ್ರತಿಭಟನೆಗೆ ಇಳಿದು ಅಪರ ಜಿಲ್ಲಾಧಿಕಾರಿ ಮತ್ತು ಆರ್.ಟಿ.ಓ.ಗೆ ಮನವಿ ಸಲ್ಲಿಸಿದರು.
ಬಾಯಿಗೆ ಬಂದಂತೆ ಪ್ರಯಾಣಿಕರಿಂದ ಹಣ ಪೀಕುತ್ತಿದ್ದಾರೆಂಬ ಸಬೂಬು ಹೇಳಿ ಆರ್.ಟಿ.ಓ. ಇಲಾಖೆ ಅಧಿಕಾರಿಗಳು ಬಾಡಿಗೆ ನೆಪದಲ್ಲಿ ನೇರವಾಗಿ ಆಟೋಗಳನ್ನು ತಮ್ಮ ಕಚೇರಿಗೆ ತೆಗೆದುಕೊಂಡು ಹೋಗಿ ಸೀಜ್ ಮಾಡುತ್ತಿರುವುದನ್ನು ಪ್ರಶ್ನಿಸಿದರೆ ದಾಖಲೆ ಇಲ್ಲದ ಆಟೋಗಳಿಗೆ ಮಾತ್ರ ಫೈನ್ ಹಾಕುತ್ತಿದ್ದೇವೆಂಬ ಉತ್ತರ ನೀಡುತ್ತಿದ್ದಾರೆ.
ದಾಖಲೆ ತೋರಿಸಿದರೂ ಒಪ್ಪುತ್ತಿಲ್ಲ. ಬಹುತೇಕ ಬಡಪಾಯಿ ಆಟೋದವರು ದಿನಕ್ಕೆ ಮುನ್ನೂರರಿಂದ ಐದು ನೂರು ರೂ.ಗಳನ್ನು ದುಡಿದು ಅದರಲ್ಲಿಯೇ ತಮ್ಮ ಕುಟುಂಬ ಸಲಹಬೇಕು ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಸಾವಿರಾರು ರೂ.ಗಳ ದಂಡ ಹಾಕುವುದು ಯಾವ ನ್ಯಾಯ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ನವಭಾರತ ಹಿಂದೂ ದಲಿತ ಸಂಘದ ಜಿಲ್ಲಾಧ್ಯಕ್ಷ ಹರೀಶ್ ಪ್ರಶ್ನಿಸಿದರು.
ಒನಕೆ ಓಬವ್ವ ಸರ್ಕಲ್ ಹಾಗೂ ಲೋಕೋಪಯೋಗಿ ಕಚೇರಿ ಎದುರು ಹತ್ತಾರು ಆಟೋಗಳನ್ನು ಸಾಲಾಗಿ ನಿಲ್ಲಿಸಿದ ಚಾಲಕರು ಮತ್ತು ಮಾಲೀಕರುಗಳು ನಮಗೆ ಆಟೋ ಚಾಲನೆ ಬಿಟ್ಟರೆ ಬೇರೆ ಯಾವ ಕಸುಬು ಗೊತ್ತಿಲ್ಲ. ಹಾಗಾಗಿ ದುಬಾರಿ ಮೊತ್ತದ ದಂಡ ವಿಧಿಸಬಾರದು. ಚಿತ್ರದುರ್ಗದಲ್ಲಿ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿರುವ ಚಾಲಕರುಗಳಿಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲತ್ತುಗಳು ದೊರಕುತ್ತಿಲ್ಲ. ದುಡಿಮೆಯನ್ನೆ ನಂಬಿರುವ ನಮಗೆ ಜೀವಿಸುವುದು ಕಷ್ಟವಾಗುತ್ತಿದೆ. ಅದಕ್ಕಾಗಿ ದಂಡದ ಮೊತ್ತ ನ್ಯಾಯೋಚಿತವಾಗಿರಲಿ ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಆರ್.ಟಿ.ಓ.ರವರಲ್ಲಿ ವಿನಂತಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಸೆಂಥಿಲ್ಕುಮಾರ್, ಕುಮಾರಸ್ವಾಮಿ ಸೇರಿದಂತೆ ನೂರಾರು ಆಟೋ ಚಾಲಕರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.