ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ‘ಶಕ್ತಿ’ ಯೋಜನೆಗೆ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಇಲ್ಲಿಯವರೆಗೆ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಅಥವಾ ಇತರ ಗುರುತಿನ ಚೀಟಿ ತೋರಿಸಿ ಪ್ರಯಾಣಿಸುತ್ತಿದ್ದರು. ಆದರೆ, ಇನ್ನು ಮುಂದೆ ಕೇವಲ ‘ಶಕ್ತಿ ಸ್ಮಾರ್ಟ್ ಕಾರ್ಡ್’ (Shakti Smart Card) ಇದ್ದರೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲು ಸಂಪುಟ ಅನುಮೋದನೆ ನೀಡಿದೆ.
ಸಾರಿಗೆ ನಿಗಮಗಳ ಮೂಲಕ ಈ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಲಾಗುವುದು. ಇದರಿಂದ ಯೋಜನೆಯಲ್ಲಿ ಪಾರದರ್ಶಕತೆ ಬರಲಿದ್ದು, ಆಧಾರ್ ಕಾರ್ಡ್ ತೋರಿಸುವ ವ್ಯವಸ್ಥೆಗೆ ಹಂತ-ಹಂತವಾಗಿ ಬ್ರೇಕ್ ಬೀಳಲಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯು ಮಹತ್ವದ ಅನುಮೋದನೆ ನೀಡಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿ, “ಫಲಾನುಭವಿಗಳಿಗೆ ಈ ಸ್ಮಾರ್ಟ್ ಕಾರ್ಡ್ಗಳನ್ನು ಉಚಿತವಾಗಿ ನೀಡಲಾಗುವುದು. ಸೇವಾ ಸಿಂಧು ಪೋರ್ಟಲ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕ ಮಹಿಳೆಯರು ನೋಂದಣಿ ಮಾಡಿಕೊಂಡು ಕಾರ್ಡ್ ಪಡೆಯಬಹುದು. ಕಾರ್ಡ್ಗಳ ತಯಾರಿಕೆಗೆ ಸ್ವಲ್ಪ ಸಮಯ ಹಿಡಿಯಲಿದ್ದು, ಶೀಘ್ರದಲ್ಲೇ ವಿತರಣೆ ಆರಂಭಿಸಲಾಗುವುದು,” ಎಂದು ತಿಳಿಸಿದ್ದಾರೆ.















