ತುಮಕೂರು; ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ವಿಚಾರ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಸಿಐಡಿ ಕೂಡ ಎಂಟ್ರಿಯಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆಯೇ ಕೆ.ಎನ್.ರಾಜಣ್ಣ ಅವರ ಪುತ್ರ ಎಂಎಲ್ಸಿ ರಾಜೇಂದ್ರ ಅವರು ತುಮಕೂರು ಎಸ್ಪಿಗೆ ದೂರು ನೀಡಿದ್ದಾರೆ. ಕಳೆದ ನವೆಂಬರ್ ನಲ್ಲಿ ನನ್ನ ಕೊಲೆಗೆ ಯತ್ನ ನಡೆದಿತ್ತು ಎಂದು ಆರೋಪಿಸಿದ್ದರು. ಇದೀಗ ಆ ಸಂಬಂಧ ದೂರು ನೀಡಿದ್ದಾರೆ.

ದೂರು ನೀಡಿದ ಬಳಿಕ ಮಾತನಾಡಿದ ಸಿ. ರಾಜೇಂದ್ರ ಅವರು, ನಾನು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಗೆ ದೂರು ನೀಡುವಂತೆ ಸೂಚನೆ ಕೊಟ್ಟಿದ್ದರು. ಅದರಂತೆ ಇವತ್ತು ದೂರು ನೀಡಿದ್ದೇನೆ. ನನ್ನ ಮಗಳ ಬರ್ತ್ ಡೇ ದಿನದಂದು ನನ್ನ ಕೊಕೆಗೆ ಪ್ರಯತ್ನ ಪಟ್ಟಿದ್ದರು. ಕೊಲೆಗೆ 70 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು. ಅದರಲ್ಲಿ ಐದು ಲಕ್ಷ ರೂಪಾಯಿ ಪಡೆದಿದ್ದಾರೆ.

ಇದೆಲ್ಲದರ ಆಡಿಯೋ ನನ್ನ ಬಳಿ ಇದೆ. ಒಂದು ಹುಡುಗಿ, ಹುಡುಗನ ನಡುವೆ ನಡೆದ ಸಂಭಾಷಣೆ ಆಡಿಯೋ ಇದೆ. ಹೀಗಾಗಿ ಭದ್ರತೆ ಕೊಡಿ ಎಂದು ಪೊಲೀಸ್ ಇಲಾಖೆಗೆ ಕೇಳಿದ್ದೇನೆ. ನಾನು ಯಾವತ್ತು ನಾನಾಯ್ತು, ನನ್ನ ಕೆಲಸವಾಯ್ತು ಅಂತ ಇದ್ದೋನು. ನನ್ನ ಮುಗಿಸಲು ಸುಪಾರಿ ಯಾಕೆ ಕೊಟ್ಟಿದ್ದಾರೆಂಬುದು ಗೊತ್ತಿಲ್ಲ. ಸೋಮ ಮತ್ತು ಭರತ್ ಎಂಬ ಹೆಸರು ಆಡಿಯೋದಲ್ಲಿದೆ. ಅವರಿಬ್ಬರು ಯಾರು ಎಂಬುದು ಕೂಡ ನನಗೆ ಗೊತ್ತಿಲ್ಲ. ಲೇಡಿ ಮತ್ತು ಒಬ್ಬ ಹುಡುಗ ಮಾತನಾಡಿರುವ ಆಡಿಯೋ ಅದು. 18 ನಿಮಿಷಗಳ ಸಂಭಾಷಣೆ ಆಡಿಯೋದಲ್ಲಿದೆ. ಸುಪಾರಿ ಕೊಟ್ಟಿದ್ದಾರೆ ಹೊಡೆಯಬೇಕು ಅಂತ. ಯಾವ ಕಾರಣಕ್ಕೆ ನನ್ನ ಮೇಲೆ ದ್ವೇಷವಿದೆ ಎಂಬುದು ಗೊತ್ತಾಗಬೇಕು. ಇದರ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ್ದಾರೆ.

