ಬಿಜೆಪಿಯಿಂದ ಮೀಸಲಾತಿ ಕಿತ್ತುಕೊಳ್ಳುವ ಹುನ್ನಾರ : ಮಾಜಿ ಸಚಿವ ಎಚ್.ಆಂಜನೇಯ ಆರೋಪ

ಚಿತ್ರದುರ್ಗ, (ಜ.01): ಸಂವಿಧಾನದ ಉಳಿವು, ಮೀಸಲಾತಿ ಹಾಗೂ ನೊಂದ ಜನರ ಹಕ್ಕುಗಳ ರಕ್ಷಣೆಗಾಗಿ ನಗರದಲ್ಲಿ ಜ.8ರಂದು ಎಸ್ಸಿ, ಎಸ್ಟಿ ಐಕ್ಯತಾ ಸಮಾವೇಶ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ನಗರದ ವಿಜ್ಞಾನ ಕಾಲೇಜ್ ಮೈದಾನದಲ್ಲಿ ಸಮಾವೇಶ ಪೆಂಡಾಲ್ ನಿರ್ಮಾಣದ ಕಾರ್ಯಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಎಸ್ಸಿ, ಎಸ್ಟಿ, ಹಿಂದುಳಿದವರು ಕಾಂಗ್ರೆಸ್ ಪಕ್ಷದ ಸಾಂಪ್ರಾದಾಯಕ ಮತದಾರರು. ಆದರೆ ಅವರಲ್ಲಿ ಇತ್ತೀಚೆಗೆ ಬಿಜೆಪಿ ಜಾತಿ ವಿಷ ಬೀಜ ಬಿತ್ತುವ ಮೂಲಕ ತನ್ನತ್ತ ಸೆಳೆಯಲು ಕುತಂತ್ರ ನಡೆಸುತ್ತಿದೆ. ಜೊತೆಗೆ ಅವರನ್ನೇ ಮುಂದಿಟ್ಟುಕೊಂಡು ಸಂವಿಧಾನ ಮತ್ತು ಮೀಸಲಾತಿಗೆ ಕುತ್ತು ತರುವ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಬಹುದೊಡ್ಡ ಕಾರ್ಯವೇ ಎಸ್ಸಿ, ಎಸ್ಟಿ ಐಕ್ಯತಾ ಸಮಾವೇಶದ ಉದ್ದೇಶ ಎಂದರು.

ಅಂಬೇಡ್ಕರ್, ಬಸವಣ್ಣ, ಬುದ್ಧನ ಆಶಯಗಳಿಗೆ ಧಕ್ಜೆ ತರುವ ಕೆಲಸಕ್ಕೆ ಕೈ ಹಾಕಿರುವ ಬಿಜೆಪಿ, ಬಡಜನರ ಬದುಕುವ ಹಕ್ಕನ್ನೇ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಗಾಂಧಿ, ನೆಹರು, ಇಂದಿರಾಗಾಂಧಿ ಸೇರಿ ಅನೇಕರು ಗುಡಿ ಕೈಗಾರಿಕೆ, ಕೃಷಿ ಕ್ಷೇತ್ರ, ಸರ್ಕಾರಿ ಸಂಸ್ಥೆಗಳನ್ನು ಬಲವರ್ಧನೆಗೊಳಿದ್ದನ್ನು ಬಿಜೆಪಿ ಸರ್ಕಾರ ನಾಶಗೊಳಿಸುತ್ತಿದೆ.
ಸರ್ಕಾರಿ ಸಂಸ್ಥೆಗಳನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವ ಮೂಲಕ ಮೀಸಲಾತಿ ನಾಶಗೊಳಿಸಲು ಮುಂದಾಗಿದೆ ಎಂದು ಹೇಳಿದರು.

ಪ್ರಸ್ತುತ ಕಾಂಗ್ರೆಸ್ ಪಕ್ಷ ದೇಶ ಹಾಗೂ ನೊಂದ ಜನರ ಪ್ರಗತಿಗೆ ಅನಿವಾರ್ಯವಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನಗಳನ್ನು ಗಳಿಸುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಜನಪರ ಸರ್ಕಾರ ತರಲು ಸಮಾವೇಶದಲ್ಲಿ ಪ್ರತಿಜ್ಞೆ ಮಾಡಲಾಗುವುದು ಎಂದರು.

ಈಗಾಗಲೇ ಡಾ.ಜಿ.ಪರಮೇಶ್ವರ್, ಸತೀಶ್ ಜಾರಿಕಿಹೊಳಿ, ಕೆ.ಎಚ್.ಮುನಿಯಪ್ಪ, ಪಿ.ಟಿ.ಪರಮೇಶ್ವರ ನಾಯ್ಕ್ ಸೇರಿ ಹಲವರು ಸಮಾವೇಶ ಯಶಸ್ವಿಗೆ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಸಮಾವೇಶದಲ್ಲಿ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಗುಣಮಟ್ಡದ ಜರ್ಮನ್ ಪೆಂಡಾಲ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್,  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಪೀರ್, ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್ ಕುಮಾರ್, ಒಬಿಸಿ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಜಿಪಂ ಮಾಜಿ ಸದಸ್ಯರಾದ ನರಸಿಂಹರಾಜು, ಟಿ.ರವಿಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಡಿ.ಎನ್.ಮೈಲಾರಪ್ಪ, ಎಸ್.ಟಿ ಘಟಕದ ಜಿಲ್ಲಾಧ್ಯಕ್ಷ ಎಚ್.ಅಂಜಿನಪ್ಪ. ಪ್ರಸನ್ನ ಜಯಣ್ಣ ಸೇರಿ ಅನೇಕ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!