ಸುದ್ದಿಒನ್, ಚಿತ್ರದುರ್ಗ, ಜುಲೈ. 30 : ರೈತರ ಜಮೀನಿಗೆ ಅಡ್ಡಲಾಗಿ ಗೋಡೆ ಕಟ್ಟಿಕೊಂಡಿದ್ದ ದೂರಿನ ಮೇರೆಗೆ ಪರಿಶೀಲನೆ ಮಾಡಲು ಬಂದಿದ್ದ ಕಂದಾಯ ನಿರೀಕ್ಷಕರ ಮೇಲೆ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಅದರಲ್ಲೂ ಚಿತ್ರದುರ್ಗ ತಹಸೀಲ್ದಾರ್ ನಾಗವೇಣಿ ಅವರ ಸಮ್ಮುಖದಲ್ಲಿಯೇ ಹಲ್ಲೆ ನಡೆದಿದೆ.
ರೈತ ಹೇಮಣ್ಣ ಅವರ ಜಮೀನಿಗೆ ಅಡ್ಡಲಾಗಿ ಶಿವ ಶಂಕರ್ ರೆಡ್ಡಿ ಮತ್ತು ವಿದ್ಯಾಶಂಕರ್ ರೆಡ್ಡಿ ಕುಟುಂಬದವರು ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂದು ಹೇಮಣ್ಣ ಅರೋಪಿಸಿದ್ದರು. ಜಮೀನಿಗೆ ಹೋಗುವುದಕ್ಕೆ ದಾರಿಯೇ ಇರಲಿಲ್ಲ. ಜಮೀನಿಗೆ ದಾರಿಬೇಕೆಂದು ಹಲವು ಬಾರಿ ಮನವಿ ಮಾಡಿದ್ದರು. ಆದರೂ ಈ ಪ್ರಕರಣವನ್ನು ರೈತ ಹೇಮಣ್ಣ ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರ ಗಮನಕ್ಕೆ ತಂದಿದ್ದರು.
ಜಮೀನು ದಾರಿ ವಿವಾದ ಹಿನ್ನೆಲೆ ಅಧಿಕಾರಿಗಳು ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಶಿವಶಂಕರ್ ರೆಡ್ಡಿ, ವಿದ್ಯಾಶಂಕರ್‌ರೆಡ್ಡಿ ಎಂಬುವರು ಕಂದಾಯ ನಿರೀಕ್ಷಕ ಪ್ರಾಣೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಆರೋಪಿಗಳು ಜಮೀನಿನ ರಸ್ತೆಗೆ ಅಡ್ಡಲಾಗಿ ಕಟ್ಟಡ ಕಟ್ಟಿಕೊಂಡಿದ್ದಾರೆ. ಅಧಿಕಾರಿಗಳು ಬಂದು ರೈತರ ಜಮೀನಿಗೆ ದಾರಿ ಬಿಟ್ಟುಕೊಡುವಂತೆ ಸೂಚಿಸಿದ್ದಕ್ಕೆ ಹಲ್ಲೆ ಮಾಡಿದ್ದಾರೆ.
ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿ ಶಿವಶಂಕರರೆಡ್ಡಿ, ವಿದ್ಯಾಶಂಕರರೆಡ್ಡಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.