ಹಾಸನ: ಇತ್ತೀಚೆಗೆ ದೇವರ ವಿಗ್ರಹಗಳನ್ನು ವಿರೂಪಗೊಳಿಸಿದ್ದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಸುದ್ದಿಯಾಗಿತ್ತು. ಇದೋಗ ಪೊಲೀಸರು ಆ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಿದ್ದಾರೆ.
ಐತಿಹಾಸಿಕ ಮಾಲೇಕಲ್ಲು ತಿರುಪತಿ ಬೆಟ್ಟದ ಬಳಿ ದೇವರ ವಿಗ್ರಹಗಳನ್ನು ವಿರೂಪಗೊಳಿಸಿದ್ದರು. ಬೆಟ್ಟದ ಈಜುಕೊಳ ಹಿಂಭಾಗ, ಶ್ರೀನಿವಾಸ ಕಲ್ಯಾಣ ಮ್ಯೂಸಿಯಂಗಾಗಿ ವಿಗ್ರಹಗಳನ್ನು ನಿರ್ಮಾಣ ಮಾಡಲಾಗಿತ್ತು. ಮೇ 31ರಂದು ಈ ಘಟನೆ ನಡೆದಿತ್ತು. ಬಳಿಕ ಪೊಲೀಸರಿಗೆ ದೂರು ಸಹ ನೀಡಲಾಗಿತ್ತು. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ, ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ಬಳಿಕ ಮಾಹಿತಿ ನೀಡಿರುವ ಎಸ್ಪಿ ಶ್ರೀನಿವಾಸ ಗೌಡ, ವಿಗ್ರಹಗಳನ್ನು ನಾಶ ಮಾಡಿದ ಐವರು ಆರೋಪಿಗಳು ಪ್ರತಿನಿತ್ಯ ಕಲ್ಯಾಣಿ ಬಳಿ ಈಜಲು ಹೋಗುತ್ತಿದ್ದರಂತೆ. ಬಳಿಕ ಅಲ್ಲಿಯೇ ಸಿಗರೇಟ್ ಕೂಡ ಸೇದುತ್ತಿದ್ದರಂತೆ. ವಿಗ್ರಹಗಳನ್ನು ಕೆತ್ತುವವರು ಈ ಸಂಬಂಧ ಪ್ರಶ್ನೆ ಮಾಡಿ, ಈ ರೀತಿ ಮಾಡಬೇಡಿ ಎಂದು ಬುದ್ಧಿ ಹೇಳಿದ್ದರಂತೆ. ಈ ಬುದ್ಧಿ ಮಾತನ್ನೇ ದ್ವೇಷವಾಗಿ ಬೆಳೆಸಿಕೊಂಡಿದ್ದ ಆ ಆರೋಪಿಗಳು, ಕೆಲಸಗಾರರು ಊಟಕ್ಕೆ ಹೋದಾಗ ಇಂಥ ಕೃತ್ಯವೆಸಗಿದ್ದಾರೆ ಎಂದಿದ್ದಾರೆ.