ದೆಹಲಿಯ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ ಅತಿಶಿ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅತ್ಯಂತ ಕಿರಿಯ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ. ರಾಜಭವನದಲ್ಲಿ ನಡೆದ ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಅತಿಶಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಅತಿಶಿ ಅವರೊಂದಿಗೆ ಇತರ ಐವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೆಹಲಿಯ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಮಾಜಿ ಸಚಿವರು, ಆಪ್ ಶಾಸಕರು ಮತ್ತು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
https://x.com/ANI/status/1837448438306558271?t=_qxEybYTV5A1yLvdM-QZSQ&s=19
43 ವರ್ಷದ ಅತಿಶಿ ಅವರು ಕೇಜ್ರಿವಾಲ್ ಸಂಪುಟದಲ್ಲಿ 13 ಪ್ರಮುಖ ಇಲಾಖೆಗಳನ್ನು ನಿರ್ವಹಿಸಿದ್ದಾರೆ. ಮತ್ತೊಂದೆಡೆ ಪಕ್ಷ ಹಾಗೂ ಸರ್ಕಾರದ ಪರವಾಗಿ ವಿರೋಧ ಪಕ್ಷದವರನ್ನು ಎದುರಿಸುವಲ್ಲಿ ಸಶಕ್ತರಾಗಿರುವ ಅತಿಶಿ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಒದಗಿ ಬಂದಿದೆ. ಅತಿಶಿ ಅವರ ಪೋಷಕರು ಕೂಡ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅತಿಶಿ ತಾಯಿ ತೃಪ್ತಿ ವಾಹಿ ಮತ್ತು ತಂದೆ ವಿಜಯ್ ಸಿಂಗ್ ಅವರು ಕೂಡ ಭಾಗವಹಿಸಿದ್ದರು.
ಮತ್ತೊಂದೆಡೆ, ಎಲ್ಜಿ ವಿಕೆ ಸಕ್ಸೇನಾ ಅವರೊಂದಿಗೆ ಅತಿಶಿ ಮತ್ತು ಇತರ ಐವರು ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರಲ್ಲಿ ಸೌರಭ್ ಭಾರದ್ವಾಜ್, ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೇನ್ ಮತ್ತು ಮುಖೇಶ್ ಅಹ್ಲಾವತ್ ಸೇರಿದ್ದಾರೆ. ಇವರಲ್ಲಿ ಸುಲ್ತಾನಪುರ ಮಜ್ರಾದಿಂದ ಪ್ರಥಮ ಬಾರಿಗೆ ಆಯ್ಕೆಯಾದ ಮುಖೇಶ್ ಅಹ್ಲಾವತ್ ಕೂಡ ಅತಿಶಿ ಅವರ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೇ ಈ ಐವರು ಸಚಿವರು ಪ್ರಮಾಣ ವಚನ ಸ್ವೀಕರಿಸಿದಾಗ ಉಪ ಮುಖ್ಯಮಂತ್ರಿ ಹುದ್ದೆ ಯಾರಿಗೂ ಹಂಚಿಕೆಯಾಗದಿರುವುದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಆದರೆ ಅತಿಶಿ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಬೇಡ ಎಂದು ಎಎಪಿ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಅತಿಶಿ ಅವರು ದೆಹಲಿಯ 8 ನೇ ಸಿಎಂ ಆಗಿ ಮತ್ತು ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿ
ಪ್ರಮಾಣ ವಚನ ಸ್ವೀಕರಿಸಿದರು. ದಿವಂಗತ ಮುಖ್ಯಮಂತ್ರಿಗಳಾದ ಸುಷ್ಮಾ ಸ್ವರಾಜ್ ಮತ್ತು ಶೀಲಾ ದೀಕ್ಷಿತ್ ಅವರು ಅತಿಶಿಗಿಂತ ಮೊದಲು ದೆಹಲಿ ಸಿಎಂ ಆಗಿದ್ದರು. ಮತ್ತು ಅತಿಶಿ ಅವರು ಎಲ್ಲರಿಗಿಂತ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮುಂದಿನ ವರ್ಷ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆಯ್ಕೆಯಾಗಿರುವ ಅತಿಶಿ ಹಾಗೂ ಇತರೆ ಸಚಿವರ ಅವಧಿ ಕೆಲವೇ ತಿಂಗಳುಗಳ ಕಾಲ ಇರಲಿದೆ. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ದೆಹಲಿ ಸರ್ಕಾರಿ ಹುದ್ದೆಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಪ್ರಮಾಣವಚನ ಸ್ವೀಕರಿಸುವ ಮೊದಲು, ಅತಿಶಿ ಮತ್ತು ಅವರ ಸಂಪುಟದ ಭಾಗವಾಗಿರುವ ಎಎಪಿ ನಾಯಕರು ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದರು.
ಸೆಪ್ಟೆಂಬರ್ 26-27ರ ವಿಶೇಷ ಅಧಿವೇಶನದಲ್ಲಿ 70 ಸದಸ್ಯರ ವಿಧಾನಸಭೆಯಲ್ಲಿ ಅವರು ತಮ್ಮ ಸರ್ಕಾರದ ಬಹುಮತವನ್ನು ಸಾಬೀತುಪಡಿಸಬೇಕಾಗಿದೆ.