ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.19 : ಪಾರಂಪರಿಕ ವೈದ್ಯರ ಹದಿನಾಲ್ಕನೆ ರಾಜ್ಯ ಸಮ್ಮೇಳನ ಅ.26, 27, 28 ರಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆಯಲಿದೆ ಎಂದು ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಹೇಳಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‍ಗುಂಡೂರಾವ್ ಸಮ್ಮೇಳನ ಉದ್ಗಾಟಿಸಲಿದ್ದಾರೆ. ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳು, ಪ್ರಸನ್ನನಾಥಸ್ವಾಮೀಜಿ ಇವರುಗಳು ಸಾನಿಧ್ಯ ವಹಿಸುವರು.
ಪಾರಂಪರಿಕ ವೈದ್ಯ ಪರಿಷತ್ ರಾಜ್ಯಾಧ್ಯಕ್ಷ ಜಿ.ಮಹದೇವಯ್ಯ ಅಧ್ಯಕ್ಷತೆ ವಹಿಸಲಿದ್ದಾರೆಂದು ತಿಳಿಸಿದರು.
ಐತಿಹಾಸಿಕ ಪರಂಪರೆಯುಳ್ಳ ಪಾರಂಪರಿಕ ವೈದ್ಯ ಪದ್ದತಿ ನಶಿಸಿ ಹೋಗುತ್ತಿರುವ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಎಂ.ಬಿ.ಬಿ.ಎಸ್. ವೈದ್ಯಕೀಯ ಪದ್ದತಿ ಇಲ್ಲದಂತ ಕಷ್ಟದ ಸಂದರ್ಭದಲ್ಲಿ ಪಾರಂಪರಿಕ ವೈದ್ಯ ಪದ್ದತಿಯಿಂದ ಅನೇಕ ದೊಡ್ಡ ದೊಡ್ಡ ಕಾಯಿಲೆಗಳನ್ನು ಗುಣಪಡಿಸಲಾಗುತ್ತಿತ್ತು.
ಆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಪಾರಂಪರಿಕ ವೈದ್ಯರನ್ನು ತುಂಬಾ ಕೇವಲವಾಗಿ ಕಾಣುತ್ತಿರುವುದು ನೋವಿನ ಸಂಗತಿ. ಸಿದ್ದೌಷಧಿಗಳ ಮೂಲಕ ಪಾರಂಪರಿಕ ವೈದ್ಯರು ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಕೊರೋನಾದಂತ ಸಾಂಕ್ರಾಮಿಕ ರೋಗಗಳು ಮತ್ತು ಜ್ವರ, ಸ್ತ್ರೀ ರೋಗ, ಸಂದಿವಾತ, ಚರ್ಮರೋಗ, ಪಶುವೈದ್ಯ, ಮಧುಮೇಹದ ಬಗ್ಗೆ ಗೋಷ್ಠಿಗಳು ನಡೆಯುತ್ತವೆ. ಐದು ಜನ ಪಾರಂಪರಿಕ ವೈದ್ಯರಿಗೆ ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದರು. ಪಾರಂಪರಿಕ ವೈದ್ಯ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.