ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ.(ಏ.02) : ಪೊಲೀಸ್ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಪೊಲೀಸ್ ಸಿಬ್ಬಂದಿ ಜೀವನ ಮಟ್ಟ ಸುಧಾರಣೆಗೆ ಪ್ರಯತ್ನ ಮಾಡಲಾಗುತ್ತಿದೆ. ನಿವೃತ್ತ ಹಾಗೂ ಸೇವೆಯಲ್ಲಿರುವ ಪೊಲೀಸರ ಕ್ಷೇಮಾಭಿವೃದ್ಧಿಗಾಗಿ ನಿಧಿ ಸಂಗ್ರಹಿಸಲಾಗುತ್ತದೆ. ಈ ನಿಧಿಯಿಂದ ಪೊಲೀಸ್ ಸಿಬ್ಬಂದಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್ ಹೇಳಿದರು.
ನಗರದ ಡಿ.ಎ.ಆರ್. ಕವಾಯತು ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಪೊಲೀಸ್ ಕಲ್ಯಾಣ ನಿಧಿಯಿಂದ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಬಳಿ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಇಲ್ಲಿ ನಿವೃತ್ತ ಸೇರಿದಂತೆ ಪೊಲೀಸ್ ಸಿಬ್ಬಂದಿಗಳ ಮಕ್ಕಳ ವಿವಾಹ ಅಥವಾ ಇತರೆ ಕಾರ್ಯಕ್ರಮಗಳಿಗೆ ಶೇ.50 ರಿಯಾಯಿತಿ ದರದಲ್ಲಿ ಭವನವನ್ನು ಬಾಡಿಗೆಗೆ ನೀಡಲಾಗುವುದು. ಪೊಲೀಸರ ಮ್ಕಕಳಿಗಾಗಿ ಕಂಪ್ಯೂಟರ್ ಸೆಂಟರ್ ತೆರೆದು ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.
ವಾಚನಾಲಯವನ್ನು ಸಹ ತೆರೆಯಲಾಗಿದೆ. ಪದವಿ ಪೂರ್ವ, ಪದವಿ, ಸ್ನಾತಕೋತ್ತರ, ಡಿಪ್ಲಮೋ, ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಸೇರಿದಂತೆ ಇತರೆ ವಿದ್ಯಾಭ್ಯಾಸ ಪಡೆಯುತ್ತಿರುವ ಜಿಲ್ಲೆಯ 62 ಪೊಲೀಸ್ ಸಿಬ್ಬಂದಿಯ ಮ್ಕಕಳಿಗೆ ಪ್ರಸ್ತುತ ವರ್ಷದಲ್ಲಿ 7,80,600 ರೂಪಾಯಿಗಳ ಶೈಕ್ಷಣಿಕ ಸಹಾಯ ಧನ ನೀಡಲಾಗಿದೆ. ಮರಣ ಹೊಂದಿದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಶವ ಸಂಸ್ಕಾರಕ್ಕಾಗಿ 10,000 ರೂಪಾಯಿ ನೀಡಲಾಗಿದೆ. ಕನ್ನಡಕ ಖರೀದಿಸಿದ 26 ಸಿಬ್ಬಂದಿಗಳಿಗೆ ತಲಾ 1,000 ರೂಪಾಯಿ ಸಹಾಯಧನ ನೀಡಲಾಗಿದೆ.
ಜಿಲ್ಲೆಯ 287 ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಆರೋಗ್ಯ ಭಾಗ್ಯ ಯೋಜನೆಯಡಿ ನೊಂದಾಯಿಸಿ ಕೊಂಡಿದ್ದು, ಇವರಿಗೆ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ನಿವೃತ್ತ ಪೊಲೀಸ್ ಕಲ್ಯಾಣ ನಿಧಿಯಿಂದ ಪ್ರಸಕ್ತ ವರ್ಷ 3,49,600 ರೂಪಾಯಿಗಳ ವೈದ್ಯಕೀಯ ಸಹಾಯ ಧನ ನೀಡಲಾಗಿದೆ. ಸದ್ಯ ಕಲ್ಯಾಣ ನಿಧಿಯಲ್ಲಿ 13,21,627 ರೂಪಾಯಿಗಳ ಬಾಕಿಯಿದೆ.
ನಿಶ್ಚಿತ ಠೇವಣಿಯಲ್ಲಿ 8 ಲಕ್ಷ ರೂಪಾಯಿ ಇರಿಸಲಾಗಿದೆ. ಪ್ರಸುತ ವರ್ಷ ಮರಣ ಹೊಂದಿದ 11 ಜನ ನಿವೃತ್ತ ಪೊಲೀಸ್ ಸಿಬ್ಬಂದಿಯ ಕುಟುಂಬದವರಿಗೆ ತಲಾ 10,000 ರೂಪಾಯಿಗಳನ್ನು ಶವ ಸಂಸ್ಕಾರಕ್ಕಾಗಿ ನೀಡಲಾಗಿದೆ. ಇದರ ಜೊತೆಗೆ ಪೊಲೀಸ್ ಕ್ಯಾಂಟೀನ್, ಮೆಡಿಕಲ್ ಹಾಗೂ ಜನರಲ್ ಸ್ಟೋರ್ ಸಹ ತೆರೆಯಲಾಗಿದೆ. ಇಲ್ಲಿ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದ ಜಿ.ಪಂ.ಸಿಇಓ ಎಂ.ಎಸ್.ದಿವಾಕರ್, ಪೊಲೀಸ್ ಸಿಬ್ಬಂದಿ ಕೆಲಸದ ಒತ್ತಡದ ನಡುವೆಯೂ ಕುಟುಂಬ, ಆರೋಗ್ಯ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಗಮನ ಹರಿಸಬೇಕು. ಪೊಲೀಸ್ ಕಲ್ಯಾಣ ನಿಧಿಯಿಂದ ಅಗತ್ಯ ಇರುವ ಪೊಲೀಸ್ ಸಿಬಂದಿಗೆ ಹೆಚ್ಚಿನ ಸಹಾಯವನ್ನು ನೀಡಲಾಗುತ್ತಿದೆ. ಇದು ಮಾದರಿ ಕೆಲಸವಾಗಿದೆ ಎಂದರು.
ನಿವೃತ್ತ ಆರಕ್ಷಕ ಉಪ ನಿರೀಕ್ಷಕ ಆರ್.ಬಿ.ಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಆಕರ್ಷಕ ಫಥ ಸಂಚಲನ ಜರುಗಿತು. ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಸನ್ಮಾನಿಸಲಾಯಿತು. ಪೊಲೀಸ್ ಧ್ವಜಗಳ ವಿತರಣೆ ಮಾಡಲಾಯಿತು. ಐಮಂಗಲ ಪೊಲೀಸ್ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಪಿ.ಪಾಪಣ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಗುಪ್ತವಾರ್ತೆ ಅಧೀಕ್ಷಕ ವಿಜಯಕುಮಾರ ಸಂತೋಷ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.