ಉಡುಪಿ: ಹಿಂದೂ ರಾಷ್ಟ್ರದ ವಿಚಾರಕ್ಕೆ ಸಂಬಂಧಿಸಿದಂತೆ ಪೇಜಾವರ ಶ್ರೀಗಳು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಶ್ರೀರಾಮ ಮಂದಿರ ಉಳಿಯಬೇಕಾದರೆ ಭಾರತ ಹಿಂದೂ ರಾಷ್ಟ್ರವಾಗಬೇಕು ಎಂದು ಹೇಳಿದ್ದರು. ಅದಕ್ಕೆ ಸ್ಪಷ್ಟನೆ ನೀಡಿರುವ ಪೇಜಾವರ ಶ್ರೀಗಳು, ಬಹು ಸಂಖ್ಯಾತರಿರುವ ರಾಷ್ಟ್ರವನ್ನು ಹಿಂದೂ ರಾಷ್ಟ್ರವಾಗಿ ಯಾಕೆ ಕರೆಯಬಾರದು ಎಂದು ಪ್ರಶ್ನಿಸಿದ್ದಾರೆ.
ಕನ್ನಡಿಗರೆ ಬಹು ಸಂಖ್ಯೆಯಲ್ಲಿ ಇರುವ ರಾಜ್ಯವನ್ನು ಕರ್ನಾಟಕ ಎಂದು ಕರೆಯಬಹುದಾದರೆ, ಹಿಂದೂಗಳು ಬಹು ಸಂಖ್ಯೆಯಲ್ಲಿ ಇರುವ ಭಾರತವನ್ನು ಹಿಂದೂ ರಾಷ್ಟ್ರ ಎಂದು ಯಾಕೆ ಕರೆಯಬಾರದು. ಕರ್ನಾಟಕ ಕನ್ನಡ ಭಾಷಿಗರು ಬಹು ಸಂಖ್ಯಾತರು ಇರುವ ರಾಜ್ಯ. ಇದು ಕನ್ನಡಿಗರು ಹುಟ್ಟಿ ಬೆಳೆದ ನೆಲ. ಇಲ್ಲಿ ಕನ್ನಡಿಗರು ಮಾತ್ರ ಅಲ್ಲ, ಎಲ್ಲಾ ಭಾಷಿಗರು ಇದ್ದಾರೆ ಎಂದ ಮಾತ್ರಕ್ಕೆ ಇದನ್ನು ಕರ್ನಾಟಕ ರಾಜ್ಯ ಎಂದು ಹೇಳಬೇಕಾ ಅಥವಾ ಬೇಡವಾ..? ಹಿಂದೂ ಸಂಸ್ಕೃತಿ ಹುಟ್ಟಿದ ನೆಲ, ಹಿಂದೂಗಳು ಬಹುಸಂಖ್ಯಾತರಾಗಿರುವ ದೇಶವನ್ನು ಹಿಂದೂಗಳಾದ ನಾವೂ ಹಿಂದೂ ರಾಷ್ಟ್ರವೆಂದು ಕರೆಯುವುದರಲ್ಲಿ ತಪ್ಪು ಏನಿದೆ. ಇದನ್ನು ತಪ್ಪು ಎಂದು ಹೇಳುವುದಾದರೇ ಕರ್ನಾಟಕವನ್ನು ಕರ್ನಾಟಕ ಎಂದು ಹೇಳುವುದು ಸಹ ತಪ್ಪೇ ಎಂದಿದ್ದಾರೆ.
ಮುಸ್ಲಿಮರಿಗೆ ಮೆಕ್ಕ, ಕ್ರಿಶ್ಚಿಯನ್ನರಿಗೆ ಜೆರುಸುಲೆಂ ಇರುವಂತೆ, ಹಿಂದೂಗಳು ನಿತ್ಯಪಠಿಸುವ ಮೋಕ್ಷದಾಯಕ ಕ್ಷೇತ್ರಗಳು ವಿಮೋಚನೆಗೊಳ್ಳಬೇಕು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಧಾರ್ಮಿಕ ಕ್ಷೇತ್ರಗಳು ಕೂಡ ವಿಮೋಚನೆಗೊಳ್ಳಬೇಕಿತ್ತು. ಆದರೆ ನಮ್ಮ ಧಾರ್ಮಿಕ ಕ್ಷೇತ್ರಗಳು ಹಾಗೆಯೇ ಬಾಕಿ ಉಳಿದಿವೆ. ಸ್ವಾತಂತ್ರ್ಯ ದೊರಕಿ 75 ವರ್ಷದ ಮೇಲಾದರೂ ವಿಮೋಚನೆಗೊಳ್ಳಲಿ. ನಮ್ಮ ಶ್ರದ್ಧಾ ಕೇಂದ್ರ ಮತ್ತೆ ನಮಗೆ ಮರಳಿ ಸಿಗಬೇಕು. ಅಯೋಧ್ಯೆಗೆ ವಿಚಾರದಲ್ಲಿ ಬಂದಿರುವ ತೀರ್ಪಿನಂತೆ ಕಾಶಿ ಮಥುರ ವಿಚಾರದಲ್ಲೂ ನ್ಯಾಯಾಲಯ ಅನುವು ಮಾಡಿಕೊಟ್ಟಿದೆ. ನ್ಯಾಯಾಲಯದ ಈ ನಡೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಗುರಿ ಮುಟ್ಟುವ ತನಕ ಈ ಕೆಲಸ ನಿಲ್ಲದಿರಲಿ. ನಾವ್ಯಾರು ಬಲತ್ಕಾರವಾಗಿ ಕ್ಷೇತ್ರವನ್ನು ತೆಗೆದುಕೊಳ್ಳುತ್ತಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನಬದ್ಧವಾಗಿ ನಡೆದುಕೊಂಡಿದ್ದೇವೆ. ಎಲ್ಲರೂ ಇದನ್ನು ಬೆಂಬಲಿಸಬೇಕೆ ಹೊರತು ವಿರೋಧಿಸಬಾರದು ಎಂದಿದ್ದಾರೆ.