ಬೆಂಗಳೂರು: ಕೊರೊನಾ ಆತಂಕ ಕಡಿಮೆಯಾದ್ರೂ ರೂಪಾಂತರಿಯ ಆತಂಕ ಕಡಿಮೆಯಾಗ್ತಿಲ್ಲ. ಈಗ ಎಲ್ಲೆಲ್ಲೂ ಓಮಿಕ್ರಾನ್ ಭಯ ಶುರುವಾಗಿದೆ. ಇದು ಅಧಿವೇಶನಕ್ಕೂ ತಟ್ಟುತ್ತಾ ಎಂಬ ಅನುಮಾನ ಕಾಡುತ್ತಿದೆ. ಆದ್ರೆ ಈ ಬಾರಿಯ ಚಳಿಗಾಲದ ಅಧಿವೇಶನ ನಿಗಧಿಯಂತೆ ಬೆಳಗಾವಿಯಲ್ಲಿ ನಡೆಯೋದು ಖಚಿತ ಎನ್ನಲಾಗುತ್ತಿದೆ.
ಕೊವೀಡ್ ಬಿಗಿ ಕ್ರಮಗಳೊಂದಿಗೆ ಸದನ ನಡೆಸಲು ಸರ್ಕಾರ ನಿರ್ಧಾರ ಮಾಡಿದೆ. ನಿಗಧಿಯಂತೆ 13 ರಿಂದ 26ರವರೆಗೆ ಅಧಿವೇಶನ ನಡೆಸಲು ಸಿದ್ದತೆ ನಡೆಸಲಾಗಿದೆ. ಈ ಹಿನ್ನೆಲೆ ಇಂದು ಸಂಜೆ ಬೆಳಗಾವಿಗೆ ತೆರಳುತ್ತಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ತಿಳಿಸಿದ್ದಾರೆ.
ಅಧಿವೇಶನದ ಹಿನ್ನೆಲೆ ಸ್ಪೀಕರ್ ನಾಳೆ ಬೆಳಗಾವಿ ಜಿಲ್ಲಾಡಳಿತದ ಜೊತೆ ಸಭೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಅಧಿವೇಶನಕ್ಕೆ ಪ್ರತ್ಯೇಕ ಕೊವೀಡ್ ಮಾರ್ಗಸೂಚಿ ಹೊರಡಿಸುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತೆ.
ಇನ್ನು ಈ ಸಂಬಂಧ ಮಾತನಾಡಿರುವ ಸಚಿವ ಆರ್ ಅಶೋಕ್, 2 ವರ್ಷಗಳಿಂದ ಬೆಳಗಾವಿ ಅಧಿವೇಶನವನ್ನು ಮುಂದೂಡ್ತಾ ಬಂದಿದ್ದೇವೆ. ಈಗ ಮತ್ತೆ ರದ್ದು ಮಾಡಿದ್ರೆ, ಅಲ್ಲಿನ ಜನರಿಗೆ ಬೇರೆ ರೀತಿಯ ಸಂದೇಶ ಹೋಗುತ್ತದೆ. ಜನರು ಕೂಡ ಭಯ ಭೀತರಾಗ್ತಾರೆ. ಹೀಗಾಗಿ ಇದು ಒಳ್ಳೆಯ ಸಂದೇಶ ಅಲ್ಲ. ಅಧಿವೇಶನ ಅಲ್ಲಿ ನಡೆಸಲೇಬೇಕಾಗಿದೆ. ಅದಕ್ಕಾಗಿ ಈ ಬಾರಿ ಅಲ್ಲಿ ಅಧಿವೇಶನ ನಡೆಸುತ್ತೇವೆ ಎಂದಿದ್ದಾರೆ.