ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ (ಮಾ.01): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಿಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅರಿತುಕೊಂಡು, ಅದರಂತೆ ಕಾರ್ಯ ನಿರ್ವಹಿಸಬೇಕು.
ಒಂದು ವಾರದೊಳಗಾಗಿ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಶೌಚಾಲಯ, ರ್ಯಾಂಪ್, ವಿದ್ಯುತ್ ವ್ಯವಸ್ಥೆ ಸಹಿತ ಎಲ್ಲ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿರುವ ಬಗ್ಗೆ ದೃಢೀಕರಣವನ್ನು ಆಯಾ ಕ್ಷೇತ್ರದ ನಿಯೋಜಿತ ಚುನಾವಣಾ ಅಧಿಕಾರಿಗಳು ನೀಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಸೂಚನೆ ನೀಡಿದರು.
ವಿಧಾನಸಭಾ ಚುನಾವಣೆಗೆ ಸಿದ್ಧತೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗವು ಯಾವುದೇ ದಿನದಂದು ಚುನಾವಣೆ ದಿನಾಂಕವನ್ನು ಘೋಷಿಸಲಿದ್ದು, ಇದರ ಮರುಕ್ಷಣವೇ ನೀತಿ ಸಂಹಿತೆ ಜಾರಿಗೆ ಬರುತ್ತದೆ.
ಈಗಾಗಲೇ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಈಗಲೆ ಎಚ್ಚೆತ್ತುಕೊಂಡು, ಪೂರ್ವಭಾವಿಯಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. “ಮತಗಟ್ಟೆಗಳಲ್ಲಿನ ಸೌಲಭ್ಯಗಳ ಕೊರತೆ, ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಶೌಚಾಲಯ, ವಿದ್ಯುತ್ ಸಂಪರ್ಕದ ಸಮಸ್ಯೆ, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲ, ಗುರುತಿನ ಕಾರ್ಡ್ ಇಲ್ಲ, ತಮ್ಮ ಮತಗಟ್ಟೆ ಬೂತ್ ಯಾವುದೆಂದು ಗೊತ್ತಿಲ್ಲ” ಇಂತಹ ದೂರುಗಳು ಚುನಾವಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕೇಳಿಬರಬಾರದು.
ಈ ನಿಟ್ಟಿನಲ್ಲಿ ಈಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡು, ಎಲ್ಲ ಮತಗಟ್ಟೆಗಳಲ್ಲಿನ ಸಮಸ್ಯೆಗಳನ್ನು ನಿವಾರಿಸುವ ಕಾರ್ಯ ಮಾಡಬೇಕು. ಮನೆ ಮನೆಗಳಿಗೆ ಭೇಟಿ ನೀಡಿ, ಮತದಾರರನ್ನು ಜಾಗೃತಗೊಳಿಸುವ ಕಾರ್ಯ ಆಗಬೇಕು. ಈ ಹಿಂದಿನ ಚುನಾವಣೆಗಳಲ್ಲಿ ಸರಾಸರಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳ ಬಗ್ಗೆ ಅವಲೋಕನ ನಡೆದು, ಇದಕ್ಕೆ ಕಾರಣವಾಗಿರುವ ಅಂಶಗಳನ್ನು ಗುರುತಿಸಿ, ಸಮಸ್ಯೆ ನಿವಾರಿಸಬೇಕು. ಕೇವಲ ಡಂಗುರ ಹಾಕಿಸಿದೆವು, ಬೀದಿ ನಾಟಕ ಪ್ರದರ್ಶಿಸಿ ಅರಿವು ಮೂಡಿಸಿದೆವು ಎಂದು ಹೇಳಿದರೆ ಅದನ್ನು ಒಪ್ಪಲು ಆಗುವುದಿಲ್ಲ.
ಚುನಾವಣೆ ಕಾರ್ಯ ಸಮರ್ಪಕವಾಗಿಸಲು ಮತಗಟ್ಟೆಗಳೇ ಮೂಲ ಆಧಾರ. ಮತಗಟ್ಟೆಗಳ ಬದಲಾವಣೆ ಅಥವಾ ಸ್ಥಳಾಂತರಕ್ಕೆ ಈಗ ಅವಕಾಶ ಇರುವುದಿಲ್ಲ. ಹೀಗಾಗಿ ಘೋಷಿತ ಮತಗಟ್ಟೆಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿರಬೇಕು.
ಎಲ್ಲೆಡೆ ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕೆ ನಡೆಸಿ, ಅರಿವು ಮೂಡಿಸುವುದರ ಜೊತೆಗೆ ಮತದಾನದ ಮಹತ್ವದ ಬಗ್ಗೆಯೂ ಜಾಗೃತಿ ನೀಡಬೇಕು. ಈ ದಿಸೆಯಲ್ಲಿ ವಿಭಿನ್ನ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಬಹುದು.
ಮತಗಟ್ಟೆಗಳಲ್ಲಿ ಶೌಚಾಲಯ, ರ್ಯಾಂಪ್, ವಿದ್ಯುತ್ ವ್ಯವಸ್ಥೆ ಎಲ್ಲವೂ ಸುಸಜ್ಜಿತವಾಗಿದೆ ಎಂಬುದನ್ನು ಆಯಾ ಕ್ಷೇತ್ರಗಳ ನಿಯೋಜಿತ ಚುನಾವಣಾ ಅಧಿಕಾರಿಗಳು ಒಂದು ವಾರದ ಒಳಗಾಗಿ ಪರಿಶೀಲಿಸಿ ದೃಢೀಕರಣ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಲೂ ನಡೆಯುತ್ತಿದ್ದು, 18 ವರ್ಷ ವಯಸ್ಸು ಪೂರ್ಣಗೊಂಡವರು ಈಗಲೂ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ನಮೂನೆ 06 ರಲ್ಲಿ ಅರ್ಜಿ ಸಲ್ಲಿಸಬಹುದು.
ಆನ್‍ಲೈನ್ ಮೂಲಕವೂ ಸಲ್ಲಿಸಲು ಅವಕಾಶವಿದೆ. ಇಂತಹ ಅರ್ಜಿಗಳನ್ನು ಆಯಾ ತಾಲ್ಲೂಕು ತಹಸಿಲ್ದಾರರು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಸ್ವೀಕೃತವಾಗುವ ಅರ್ಜಿಗಳನ್ನು ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದ ಬಳಿಕವೇ ಮಾಡಬೇಕು.
ಇದಕ್ಕೂ ಮೊದಲು ಶಿರಸ್ತೆದಾರರು ಖುದ್ದು ಸಂಬಂಧಪಟ್ಟ ಮತಗಟ್ಟೆಗೆ ಭೇಟಿ ನೀಡಿ, ಪ್ರಮಾಣಿಕರಿಸಿದಲ್ಲಿ ಮಾತ್ರವೇ ಇಂತಹ ಅರ್ಜಿಗಳಿಗೆ ಕ್ರಮ ವಹಿಸಬೇಕೆ ಹೊರತು, ವಿನಾಕಾರಣ ಯಾವುದೇ ಹೆಸರುಗಳನ್ನು ಡಿಲೀಟ್ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕಾರ್ಯ ನಡೆಯುವ ಸ್ಥಳಗಳು, ಮತ ಎಣಿಕೆ ನಡೆಯುವ ಸ್ಥಳಗಳಲ್ಲಿ ಕೈಗೊಳ್ಳಬೇಕಾದ ವ್ಯವಸ್ಥೆಗಳು, ಇರಬೇಕಾದ ಮೂಲಭೂತ ಸೌಲಭ್ಯಗಳ ಬಗ್ಗೆಯೂ ಅಧಿಕಾರಿಗಳು ಕ್ರಮ ವಹಿಸಬೇಕು. ಚುನಾವಣೆ ಪ್ರಕ್ರಿಯೆಗಳ ಪರಿಶೀಲನೆಗೆ ಆಗಮಿಸುವ ಚುನಾವಣಾ ವೀಕ್ಷಕರ ವಾಸ್ತವ್ಯದ ಸ್ಥಳಗಳ ನಿಗದಿ, ಅವರಿಗೆ ಲೈಜನಿಂಗ್ ಅಧಿಕಾರಿಗಳ ನೇಮಕ ಎಲ್ಲವೂ ಈಗಲೆ ಸಿದ್ಧ ಮಾಡಿಕೊಳ್ಳಬೇಕು.
ಜಿಲ್ಲೆಯಲ್ಲಿರುವ ಎಲ್ಲ ಪ್ರವಾಸಿ ಮಂದಿರಗಳಲ್ಲಿ ಸಣ್ಣಪುಟ್ಟ ದುರಸ್ತಿ ಕಾರ್ಯಗಳಿದ್ದಲ್ಲಿ, ಅದನ್ನು ಕೂಡಲೆ ಕೈಗೊಂಡು, ಸುಸಜ್ಜಿತವಾಗಿರಿಸಿಕೊಳ್ಳಬೇಕು. ಚುನಾವಣಾ ಕಾರ್ಯ ಒಂದು ವ್ಯವಸ್ಥಿತ ಹಾಗೂ ಯೋಜಿತ ಪ್ರಕ್ರಿಯೆಯಾಗಿದ್ದು, ಎಲ್ಲರೂ ಸಕ್ರಿಯರಾಗಿ ತೊಡಗಿಕೊಂಡಲ್ಲಿ ಮಾತ್ರ ಎಲ್ಲವೂ ಸುಸೂತ್ರವಾಗಿ ನಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ಚಂದ್ರಯ್ಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಬಿ. ಆನಂದ್, ಜಂಟಿಕೃಷಿ ನಿರ್ದೇಶಕ ರಮೇಶ್ ಕುಮಾರ್ ಸೇರಿದಂತೆ ವಿಧಾನಸಭಾ ಕ್ಷೇತ್ರಗಳ ನಿಯೋಜಿತ ಚುನಾವಣಾ ಅಧಿಕಾರಿಗಳು, ತಹಸಿಲ್ದಾರರು, ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.