ಚಿತ್ರದುರ್ಗ : ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳು ಪ್ರತಿ ಮನೆ ಮನೆಗೂ ಮುಟ್ಟಿವೆ ಹಾಗಾಗಿ ಮುಂದಿನ ಚುನಾವಣೆಯಲ್ಲಿ ಮತದಾರರ ಬಳಿ ಹೋಗಿ ಧೈರ್ಯವಾಗಿ ಮತ ಕೇಳಬಹುದು ಎಂದು ಕಾರ್ಯಕರ್ತರಿಗೆ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ತಿಳಿಸಿದರು.
ಬಿಜೆಪಿ ಕಛೇರಿಯಲ್ಲಿ ಭಾನುವಾರ ನಡೆದ ಚಿತ್ರದುರ್ಗ ನಗರ ಮಂಡಲ ಪದಾಧಿಕಾರಿಗಳ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಶಾಸಕರು ಎಲ್ಲಾ ಯೋಜನೆಗಳನ್ನು ಕ್ಷೇತ್ರದ ಮತದಾರರಿಗೆ ತಲುಪಸಿದ್ದೇನೆ. ನಗರದ ಎಲ್ಲಾ ಕಡೆ ಸಿ.ಸಿ. ರಸ್ತೆ, ಬೀದಿ ದೀಪ, ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ನಗರದ 35 ವಾರ್ಡ್‍ಗಳಲ್ಲಿಯೂ ನಮ್ಮ ಮತದಾರರಿದ್ದಾರೆ. ಹಾಗಾಗಿ ಪಕ್ಷದ ಕಾರ್ಯಕರ್ತರು ಯಾವುದೇ ಮುಜುಗರವಿಲ್ಲದೆ ಮತದಾರರ ಬಳಿ ಹೋಗಿ ಚುನಾವಣೆಯಲ್ಲಿ ಮತಕೇಳಿ ಎಲ್ಲಿಯಾದರೂ ದೂರುಗಳು ಬಂದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.
ನಗರದ ಕೊಳಗೇರಿಗಳಲ್ಲಿ 30 ರಿಂದ 40 ಸಾವಿರ ಜನ ವಾಸಿಸುತ್ತಿದ್ದಾರೆ. ಅಲ್ಲಿ ವಿಶೇಷ ಕಾರ್ಯಕ್ರಮವನ್ನು ಹಾಕಿಕೊಳ್ಳೋಣ. ಸ್ಲಂನಲ್ಲಿ ಮನೆಗಳಿಗೆ ಖಾತೆ ಇಲ್ಲದಿದ್ದರೂ ಖಾತೆ ಮಾಡಿಸಬೇಕು ಇಲ್ಲಿ ಯಾವುದೇ ಜಾತಿ ವರ್ಗದ ಪ್ರಶ್ನೆ ಇಲ್ಲ ಎಲ್ಲರಿಗೂ ಸರ್ಕಾರದ ಸವಲತ್ತುಗಳನ್ನು ಮುಟ್ಟಿಸುವುದಷ್ಟೇ ನಮ್ಮ ಕೆಲಸ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ 2023ರಲ್ಲಿ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಕೇಳಲು ಪಕ್ಷದ ಸಾಕಷ್ಟು ಆಧಾರಗಳಿವೆ. ನಗರೋತ್ಥಾನ ಯೋಜನೆಯಡಿ ನಗರಕ್ಕೆ 40ಕೋಟಿ ರೂ ಬಂದಿದೆ. ಇದರಲ್ಲಿ ರಸ್ತೆ, ಉದ್ಯಾನವನ, ದೀಪಗಳಿಗೆ ಬಳಸಲಾಗಿದೆ. ಇನ್ನು 25 ಕೋಟಿ ರೂ ತರುವ ಪ್ರಯತ್ನ ಮಾಡುತ್ತೇನೆ. ಮುಸ್ಲಿಂ ಏರಿಯಾಗಳಲ್ಲಿಯೂ ಸಿಮೆಂಟ್ ರಸ್ತೆ ಮಾಡಿದ್ದೇನೆ. 24/7 ನೀರು ಬರುತ್ತದೆ. ಇನ್ನು ಒಂದೂವರೆ ವರ್ಷದಲ್ಲಿ ಮನೆ ಮನೆಗೆ ಗ್ಯಾಸ್ ಸಂಪರ್ಕ ಕೂಡ ಕಲ್ಪಿಸಲಾಗುವುದು. ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಅನಿವಾರ್ಯವಾಗಿ ಕೆಲವು ಕಡೆ ಮರಗಳನ್ನು ಕಡಿದಿರುವುದು ನನಗೂ ಮನಸಿಗೆ ನೋವಾಗಿದೆ. ಅದಕ್ಕೆ ಪ್ರತಿಯಾಗಿ ನಗರದಲ್ಲಿ ನೂರಾರು ಗಿಡಗಳನ್ನು ನೆಡಲಾಗಿದೆ ಎಂದು ತಿಳಿಸಿದರು.
ಮನೆಗಳಿಗಾಗಿ 18,000 ಅರ್ಜಿಗಳು ಬಂದಿದ್ದು, ಅದರಲ್ಲಿ 8000 ಅರ್ಜಿಗಳು ಭೋಗಸ್ ಇದೆ. ಎಲ್ಲಾ ಬಡವರಿಗೂ ಮನೆ ನೀಡಬೇಕೆಂಬುದು ನನ್ನ ಉದ್ದೇಶ. ಚುನಾವಣೆಯಲ್ಲಿ ಮತಕೇಳಲು ಯಾವುದೇ ಸಮಸ್ಯೆ ಇಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 75 ಯೂನಿಟ್ ವಿದ್ಯುತ್ತನ್ನು ರಾಜ್ಯ ಸರ್ಕಾರ ಉಚಿತವಾಗಿ ನೀಡಿದೆ. ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ಕೊಡುತ್ತಿದೆ ಎಂದರು.
ಬಿಜೆಪಿ ನಗರಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ ಮಾತನಾಡಿ ಪಕ್ಷದ ಕೆಲಸಕ್ಕೆ ಪ್ರತಿಯೊಬ್ಬರು ಸಮಯವನ್ನು ಮೀಸಲಿಡಬೇಕಾಗಿದೆ. ನಗರದ 35 ವಾರ್ಡ್‍ಗಳಲ್ಲಿಯೂ ಯಾವುದೇ ಸಮಸ್ಯೆ ಇಲ್ಲದಂತೆ ಶಾಸಕರು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದರು. ಜೊತೆಗೆ ನಗರಸಭೆ ಸದಸ್ಯರು ನನ್ನ ಜೊತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಬುರುಡೆ ಕಟ್ಟೆ, ಉಪಾಧ್ಯಕ್ಷ ಚಂದ್ರಿಕಾ ಲೋಕನಾಥ್, ನಗರಸಭೆ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ, ಸದಸ್ಯರುಗಳಾದ ಹರೀಶ್, ಸುರೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲಂ ಸೀತರಾಮ ರೆಡ್ಡಿ ಸೇರಿದಂತೆ ನಗರ ಮಂಡಲದ ಪದಾಧಿಕಾರಿಗಳು ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದರು.