ಏಷ್ಯಾ ಕಪ್ ವೇಳಾಪಟ್ಟಿ ಬಿಡುಗಡೆ : ಭಾರತ ಮತ್ತು ಪಾಕಿಸ್ತಾನ ಪಂದ್ಯ ಎಲ್ಲಿ ? ಯಾವಾಗ ? ಇಲ್ಲಿದೆ ಸಂಪೂರ್ಣ ಮಾಹಿತಿ …!

ಸುದ್ದಿಒನ್

ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ. ಮನರಂಜನೆಯ ರಸದೌತಣ ಯಾವಾಗ ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ
ಏಷ್ಯಾ ಕಪ್ 2023 ರ ವೇಳಾಪಟ್ಟಿ ಬಿಡುಗಡೆಯಾಗುವ ಮೂಲಕ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಏಷ್ಯನ್ ಕ್ರಿಕೆಟ್ ಮಂಡಳಿ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಆಗಸ್ಟ್ 30 ರಂದು ಆರಂಭವಾಗಲಿರುವ ಟೂರ್ನಿ ಸೆಪ್ಟೆಂಬರ್ 17 ರಂದು ಫೈನಲ್ ಪಂದ್ಯದೊಂದಿಗೆ ಮುಕ್ತಾಯವಾಗಲಿದೆ.

ಟೂರ್ನಿಯ ಪ್ರಮುಖ ಆಕರ್ಷಣೆಯ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ಪಂದ್ಯ ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು 6 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಭಾರತ, ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಎ ಗುಂಪಿನಲ್ಲಿವೆ. ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಬಿ ಗುಂಪಿನಲ್ಲಿವೆ. ಆಯಾ ಗುಂಪಿನಲ್ಲಿ ಟಾಪ್ 2 ತಂಡಗಳು ಸೂಪರ್ 4 ಗೆ ಅರ್ಹತೆ ಪಡೆಯುತ್ತವೆ. ಸೂಪರ್ 4 ರಲ್ಲಿ ಟಾಪ್ 2 ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಗ್ರೂಪ್ ಹಂತದಲ್ಲಿ ಭಾರತ ತಂಡ ಪಾಕಿಸ್ತಾನ ಹಾಗೂ ನೇಪಾಳ ವಿರುದ್ಧವೂ ಪಂದ್ಯ ಆಡಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 2 ರಂದು ನಡೆಯಲಿದೆ. ಭಾರತ ತಂಡ ಸೆಪ್ಟೆಂಬರ್ 4 ರಂದು ನೇಪಾಳವನ್ನು ಎದುರಿಸಲಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ 3 ಬಾರಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಈ 2 ತಂಡಗಳು ಲೀಗ್ ಹಂತ, ಸೂಪರ್ 4 ಮತ್ತು ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ.

ಆಗಸ್ಟ್ 30 ರಂದು ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೇಪಾಳ ಮುಖಾಮುಖಿಯಾಗಲಿವೆ. ಈ ಪಂದ್ಯ ಪಾಕಿಸ್ತಾನದಲ್ಲಿ ನಡೆಯಲಿದೆ. ಗುಂಪು ಹಂತದ ಸ್ಪರ್ಧೆಗಳು ಆಗಸ್ಟ್ 30 ರಿಂದ ಸೆಪ್ಟೆಂಬರ್ 5 ರವರೆಗೆ ನಡೆಯಲಿದೆ. ಸೂಪರ್ 4 ಸ್ಪರ್ಧೆಯು ಸೆಪ್ಟೆಂಬರ್ 6 ರಿಂದ 15 ರವರೆಗೆ ನಡೆಯಲಿದೆ. ಸೆಪ್ಟೆಂಬರ್ 17 ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯುವ ಅಂತಿಮ ಪಂದ್ಯದೊಂದಿಗೆ ಪಂದ್ಯಾವಳಿಯು ಮುಕ್ತಾಯಗೊಳ್ಳಲಿದೆ.

ವಿಶ್ವಕಪ್‌ಗೂ ಮುನ್ನ ನಡೆಯಲಿರುವ ಏಷ್ಯಾಕಪ್ ಈ ಬಾರಿ ಏಕದಿನ ಮಾದರಿಯಲ್ಲಿ ನಡೆಯಲಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನವು ಈ ಬಾರಿಯ ಏಷ್ಯಾಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಿದೆ.

ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳು ನಡೆಯಲಿವೆ. ಅದರಲ್ಲಿ 9 ಪಂದ್ಯಗಳು ಶ್ರೀಲಂಕಾದಲ್ಲಿ ಮತ್ತು 4 ಪಾಕಿಸ್ತಾನದಲ್ಲಿ ನಡೆಯಲಿವೆ. ಭಾರತ ಆಡುವ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.

Share This Article
Leave a Comment

Leave a Reply

Your email address will not be published. Required fields are marked *