ರಾಜಕೀಯದಲ್ಲಿ ಎಷ್ಟೇ ದ್ವೇಷಿಗಳಿದ್ದರೂ ಅದು ಸ್ಪರ್ಧೆಯ ವಿಚಾರಕ್ಕೆ ಮಾತ್ರ ಯುದ್ಧ ಸಾರಬೇಕು. ಅದೆಷ್ಟೋ ರಾಜಕಾರಣಿಗಳು ಇರುವುದೇ ಹಾಗೇ. ರಾಜಕೀಯದ ಪಡಸಾಲೆಯಲ್ಲಿ ಕಿತ್ತಾಡಿಕಿಂಡರು, ಸಭೆ ಸಮಾರಂಭಗಳಲ್ಲಿ ಆತ್ಮೀಯರಾಗಿಯೇ ಕಾಣಿಸಿಕೊಳ್ಳುತ್ತಾರೆ. ಆದರೆ ಮುನಿರತ್ನ ಮಾಡಿದ್ದ ಪ್ಲ್ಯಾನ್ ಗಳನ್ನ ಕೇಳಿದರೆ ಎಂಥವರಿಗೆ ಆದರೂ ಎದೆ ನಡುಗುತ್ತದೆ. ಅದರಲ್ಲೂ ತಮ್ಮದೇ ಪಕ್ಷದಲ್ಲಿದ್ದ ವ್ಯಕ್ತಿಗಳ ಜೀವನವನ್ನೇ ಹಾಳು ಮಾಡುವ ಹುನ್ನಾರ ಮಾಡಿದ್ದಾರೆ ಎನ್ನಲಾಗಿದೆ.
ವಿಪಕ್ಷ ನಾಯಕ ಆರ್ ಅಶೋಕ್ ಅವರ ಹುಟ್ಟುಹಬ್ಬಕ್ಕೆ ಹೂಗುಚ್ಛ ನೀಡುವ ಪ್ಲ್ಯಾನ್ ಮಾಡಿಕೊಂಡಿದ್ದವ, ಕೈಗೆ ಗ್ಲೌಸ್ ಹಾಕಿಕೊಂಡು, ಅದರಲ್ಲಿ ಬ್ಲೇಡ್ ಅಳವಡಿಸಿಕೊಂಡು, ಆ ಗ್ಲೌಸ್ ನಲ್ಲಿ ಹೆಚ್ಐವಿ ಸೋಂಕಿತನ ರಕ್ತದ ಟ್ಯೂಬ್ ಇಟ್ಟುಕೊಂಡು, ಆ ರಕ್ತವನ್ನು ಆರ್ ಅಶೋಕ್ ಅವರಿಗೆ ಇಂಜೆಕ್ಟ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿದ್ದರಂತೆ. ಈ ವಿಚಾರ ಕೇಳಿ ಆರ್ ಅಶೋಕ್ ಅವರಿಗೆ ದಿಗಿಲು ಬಡಿದಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ ಅಶೋಕ್ ಅವರು, ಮುನಿರತ್ನ ಅವರನ್ನ ನಾವ್ಯಾರು ಬೆಂಬಲಿಸಲ್ಲ. ಉಪ್ಪು ತಿಂದವ ನೀರು ಕುಡಿಯಲೇಬೇಕು. ಈ ಬಗ್ಗೆ ಪೊಲೀಸರು ತನಿಖೆ ಮಾಡಬೇಕು. ಆಗ ಸತ್ಯಾಸತ್ಯತೆ ಹೊರಗೆ ಬರುತ್ತದೆ. ರಾಜಕೀಯದಲ್ಲಿ ಈ ರೀತಿಯ ಘಟನೆಗಳು ನಡೆದರೆ ಯಾವ ರಾಜಕಾರಣಿಯೂ ಬದುಕುವುದಿಲ್ಲ. ನಮ್ಮ ಪಕ್ಷಕ್ಕೆ ಮುನಿರತ್ನ ಅವರು ಬಂದು ಐದು ವರ್ಷಗಳಾಗಿವೆ. ಕಾಂಗ್ರೆಸ್ ನಲ್ಲಿ 30 ವರ್ಷವಿದ್ದರು. ನಾವೂ ಮಂತ್ರಿಗಳಾಗಿ, ಶಾಸಕರಾಗಿ ಕೆಲಸ ಮಾಡಲು ಭಯವಾಗುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ಈ ಬಗ್ಗೆ ಸರ್ಕಾರ ಹಾಗೂ ಗೃಹ ಸಚಿವರು ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ನೋಡುತ್ತೇನೆ ಎಂದಿದ್ದಾರೆ.