ಮಂಡ್ಯ: ಹಳೆ ಮೈಸೂರು ಭಾಗದಲ್ಲಿ ಈ ಬಾರಿ ಕಮಲ ಅರಳಿಸಲೇಬೇಕೆಂದುಕೊಂಡಿರುವ ಬಿಜೆಪಿ ಹೊಸ ಹೊಸ ಪ್ಲ್ಯಾನ್ ಮಾಡುತ್ತಿದೆ. ಅದರ ಭಾಗವಾಗಿ ಮಂಡ್ಯ ಉಸ್ತುವಾರಿಯನ್ನು ಬದಲಾವಣೆ ಮಾಡಿದ್ದರು. ಗೋಪಾಲಯ್ಯ ಅವರನ್ನು ತೆಗೆದು ಸಚಿವ ಆರ್ ಅಶೋಕ್ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿತ್ತು. ಆದ್ರೆ ಪಕ್ಷದವರಿಂದಾನೇ ಇದಕ್ಕೆ ವಿರೋಧ ವ್ಯಕ್ತವಾಗಿತ್ತು.
ಗೋ ಬ್ಯಾಕ್ ಅಶೋಕ್ ಎಂಬ ಘೋಷಣೆ ಕೂಡ ಎದುರಾಗಿತ್ತು. ಕಂಡ ಕಂಡ ಗೋಡೆಗಳಲ್ಲೆಲ್ಲಾ ಗೋ ಬ್ಯಾಕ್ ಅಶೋಕ್ ಎಂಬ ಪೋಸ್ಟರ್ ಕಾಣಿಸುತ್ತಿತ್ತು. ಇದನ್ನೆಲ್ಲಾ ಗಮನಿಸಿ, ಅಶೋಕ್ ಅವರು ಉಸ್ತುವಾರಿಯಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಸಚಿವ ಆರ್ ಅಶೋಕ್ ಅವರು ಮನವಿ ಮಾಡಿಕೊಂಡಿದ್ದರಂತೆ.
ಚುನಾವಣೆ ಬೇರೆ ಹತ್ತಿರವಾಗುತ್ತಿದೆ. ಹೀಗಾಗಿ ತಾನು ಸ್ಪರ್ಧಿಸುವ ಪದ್ಮನಾಭನಗರ ಕ್ಷೇತ್ರದಲ್ಲಿ ಓಡಾಡಬೇಕಾಗಿದೆ. ಜೊತೆಗೆ ಅಂತರಾಷ್ಟ್ರೀಯ ಸಿನಿಮೋತ್ಸವದ ಉಸ್ತುವಾರಿ ಜೊತೆಗೆ ಗ್ರಾಮ ವಾಸ್ತವ್ಯ ಕೂಡ ಮಾಡಬೇಕಾಗಿದೆ. ಹೀಗಾಗಿ ಮಂಡ್ಯ ಉಸ್ತುವಾರಿ ಹೊರೆಯಾಗಿದೆ ಎಂದಿದ್ದರಂತೆ. ಹೀಗಾಗಿ ಉಸ್ತುವಾರಿಯಿಂದ ಮುಕ್ತಗೊಳಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಮೊದಲೇ ಉಸ್ತುವಾರಿಯಾಗಿ ಗೋಪಾಲಯ್ಯ ಅವರು ಇದ್ದರು. ಇದೀಗ ಮತ್ತೆ ಅವರನ್ನೇ ಉಸ್ತುವಾರಿಯನ್ನಾಗಿ ಮಾಡಲಿದ್ದಾರೆ ಎನ್ನಲಾಗಿದೆ. ಚುನಾವಣೆ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂಬ ಕಾರಣಲ್ಕೆ ಉಸ್ತುವಾರಿಯನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ.