ಶಿವಮೊಗ್ಗ: ಇಂದು ಯುವನಿಧಿ ಕಾರ್ಯಕ್ರಮಕ್ಕೆ ಶಿವಮೊಗ್ಗದಿಂದ ಅದ್ದೂರಿ ಚಾಲನೆ ನೀಡಲಾಗಿದೆ. ಈ ಯುವನಿಧಿ ಮೂಲಕ ನಿರುದ್ಯೋಗ ಪದವೀಧರ ಯುವಕರು ಪ್ರತಿ ತಿಂಗಳ 3 ಸಾವಿರ ಹಣ ಪಡೆಯಬಹುದು. ಎರಡು ವರ್ಷಗಳ ಕಾಲ ಸರ್ಕಾರ ಹಣ ನೀಡಲಿದ್ದು, ಬಳಿಕ ನಿಲ್ಲಿಸಲಿದೆ. ಕೆಲಸ ಸಿಕ್ಕ ಕೂಡಲೇ ಈ ಜಮಾವಣೆಯಾಗುವುದು ನಿಲ್ಲುತ್ತದೆ. ಯುವನಿಧಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿರುವ ಸಿದ್ದರಾಮಯ್ಯ, ಬಿಜೆಪಿಯವರು ರಾಮಮಂದಿರ ವಿಚಾರಕ್ಕೆ ರಾಜಕೀಯ ಮಾಡುತ್ತಿದ್ದಾರೆ. ನಾವೂ ರಾಮನನ್ನು ವಿರೋಧಿಸುತ್ತಿಲ್ಲ. ರಾಮಮಂದಿರ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಯನ್ನು ವಿರೋಧಿಸುತ್ತಿದ್ದೇವೆ. ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗದ ನಮ್ಮ ಹೈಕಮಾಂಡ್ ನಾಯಕರ ನಿರ್ಧಾರ ಸರಿಯಾಗಿದೆ. ಅದನ್ನು ನಾನು ಸ್ವಾಗತಿಸುತ್ತೇನೆ. ರಾಮಮಂದಿರ ಉದ್ಘಾಟನೆ ಬಳಿಕ ಅಯೋಧ್ಯೆಗೆ ಭೇಟಿ ನೀಡುತ್ತೇನೆ. ರಾಮಂಮದಿರ ಯಾವ ರೀತಿ ನಿರ್ಮಿಸಿದ್ದಾರೆಂದು ನೋಡಿ ಬರುತ್ತೇನೆ ಎಂದಿದ್ದಾರೆ.
ಜಾತಿ, ಧರ್ಮ, ಪಕ್ಷ-ಪಂಥವನ್ನು ಮೀರಿ ಸರ್ವರನ್ನೂ ಒಳಗೊಂಡು ಭಕ್ತಿ ಮತ್ತು ಗೌರವದಿಂದ ನಡೆಸಬೇಕಾದ ಒಂದು ಧಾರ್ಮಿಕ ಕಾರ್ಯಕ್ರಮವನ್ನು ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಘ ಪರಿವಾರದ ನಾಯಕರು ಶ್ರೀರಾಮನಿಗೆ ಹಾಗೂ ದೇಶದ 140 ಕೋಟಿ ಜನತೆಗೆ ಅಗೌರವವನ್ನುಂಟು ಮಾಡಿದ್ದಾರೆ. ಶ್ರದ್ದಾಪೂರ್ವಕವಾಗಿ ನಡೆಸಬೇಕಾಗಿದ್ದ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಪ್ರಚಾರದ ಅಭಿಯಾನವನ್ನಾಗಿ ಮಾಡಿದ್ದು ಸಮಸ್ತ ಹಿಂದೂ ಬಾಂಧವರಿಗೆ ಮಾಡಿರುವ ದ್ರೋಹವಾಗಿದೆ ಎಂದು ಗುಡುಗಿದ್ದರು.