ಚಿತ್ರದುರ್ಗ, (ಜ.02): ನಗರದಲ್ಲಿ ಆರ್ಯವೈಶ್ಯ ಸಂಘ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವಿಶೇಷವಾಗಿ ಆಚರಿಸುತ್ತಾ ಬಂದಿದೆ. ಅದರಂತೆಯೇ ಈ ದಿನ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪುಷ್ಪಾಲಂಕಾರದೊಂದಿಗೆ ದೇವತೆಗಳನ್ನು ಅಲಂಕರಿಸಿರುವರು ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಸಂತಸ ವ್ಯಕ್ತಪಡಿಸಿದರು.
ಸೋಮವಾರದಂದು ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ವೈಕುಂಠದ್ವಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ತಿರುಪತಿಗೆ ಹೋಗಿ ಅಲ್ಲಿನ ಜನದಟ್ಟಣೆಯ ನಡುವೆ ತಿಮ್ಮಪ್ಪನ ದರ್ಶನ ಮಾಡಲು ಸಾಧ್ಯವಾಗದಿರುವ ಭಕ್ತರಿಗೆ ಇಲ್ಲಿಯೇ ದರ್ಶನ ಭಾಗ್ಯ ಕಲ್ಪಿಸಿರುವ ಆರ್ಯವೈಶ್ಯ ಸಂಘದ ಎಲ್ಲಾ ಬಾಂಧವರಿಗೆ ಶುಭ ಹಾರೈಸಿದರು. ನಮ್ಮ ಜಿಲ್ಲೆಗೇ ಆದರ್ಶದ ಸಂಪ್ರದಾಯವಿದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಟಿ. ಬದರೀನಾಥ್‍ರವರು ಮಾತನಾಡುತ್ತಾ ಪ್ರತಿ ವರುಷವೂ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಪದ್ಧತಿಯು ಯುವ ಪೀಳಿಗೆಗೆ ಧಾರ್ಮಿಕ ವಿಚಾರಗಳನ್ನು ಹಸ್ತಾಂತರ ಮಾಡುವಂತಾಗಿದೆ. ನಾರಾಯಣನ ವಿವಿಧ ಅವತಾರಗಳ ಪ್ರದರ್ಶನವನ್ನು ಮಾಡಿ ವಿಶೇಷ ಆಕರ್ಷಣೆ ಉಂಟು ಮಾಡಿರುವ ವ್ಯವಸ್ಥೆ ಎಲ್ಲರಿಗೂ ಮನಮುಟ್ಟುವಂತಿದೆ ಎಂದರು.
ಆರ್ಯವೈಶ್ಯ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಎಸ್.ಎನ್. ಕಾಶಿನಾಥ ಶೆಟ್ಟಿಯವರು ಮಾತನಾಡುತ್ತಾ 1996ರಿಂದ ನಿರಂತರವಾಗಿ ಆಚರಿಸಿಕೊಂಡು ಬರುತ್ತಿರುವ ಈ ಕಾರ್ಯಕ್ರಮ ಎಲ್ಲರ ಮನಸ್ಸನ್ನು ಸೆಳೆಯುತ್ತಿದೆ ಎಂದರು. ಸಾಮಾಜಿಕ ಜಾಲತಾಣಗಳಿಲ್ಲದ ಸಂದರ್ಭದ ಹಳೆಯ ನೆನಪುಗಳನ್ನು ಹಂಚಿಕೊಂಡರು.
ಆರ್ಯವೈಶ್ಯ ಸಂಘದ ಮಾಜಿ ಅಧ್ಯಕ್ಷರಾದ ಕೊಟ್ರೇಶ್ ಶೆಟ್ಟರು ನಮ್ಮ ಸಮಾಜ ದಾನ ಧರ್ಮಗಳಿಗೆ ಹೆಸರಾಗಿದ್ದು, ಧಾರ್ಮಿಕ ಹಾಗೂ ದೇವತಾ ಕಾರ್ಯಕ್ರಮಗಳಲ್ಲಿ ಸದಾ ಮುಂದು ಎಂದರು.
ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಎಲ್.ಇ. ಶ್ರೀನಿವಾಸಬಾಬು ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಸಮಾಜದ ಗಣ್ಯರಾದ ಎಂ.ಕೆ. ರವೀಂದ್ರ, ಕುಪೇಂದ್ರಶೆಟ್ಟಿ, ಪಿ.ಎಲ್. ಸುರೇಶರಾಜು, ಲಕ್ಷ್ಮೀನಾರಾಯಣ್ ಮತ್ತು ಇತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಆಶಾ ಸುದರ್ಶನ್‍ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು, ಎನ್. ಶಶಿಧರ ಗುಪ್ತರವರು ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಎಸ್.ನಾಗರಾಜ್‍ರವರು ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು ಎಂದು ಟಿ.ವಿ. ಸುರೇಶಗುಪ್ತ ಅವರು ತಿಳಿಸಿದ್ದಾರೆ.