ಧಾರವಾಡ : ಕಳೆದ ಬಾರಿ ಸಿಎಂ ರೇಸ್ ನಲ್ಲಿ ಶಾಸಕ ಅರವಿಂದ್ ಬೆಲ್ಲದ್ ಹೆಸರು ಕೂಡ ಇತ್ತು. ಕೆಲವು ಮೂಲಗಳು ಇನ್ನೇನು ಅರವಿಂದ್ ಬೆಲ್ಲದ್ ಮುಖ್ಯಮಂತ್ರಿ ಪಟ್ಟಕ್ಕೇರುತ್ತಾರೆ ಎನ್ನುವಾಗಲೇ ಎಲ್ಲವೂ ಉಲ್ಟಾ ಪಲ್ಟಾ ಆಗಿತ್ತು. ಆದರೆ ಇದೀಗ ಹೊಸ ರೀತಿಯ ಆರೋಪವೊಂದು ಕೇಳಿ ಬರುತ್ತಿದೆ. ಸಿಎಂ ಆಗುವುದಕ್ಕಾಗಿ ಶಾಸಕ ಅರವಿಂದ್ ಬೆಲ್ಲದ್ ಅವರು ಬಾವಿಯೊಂದನ್ನು ಮುಚ್ಚಿಸಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ.
ಈ ಸಂಬಂಧ ಕಾಂಗ್ರೆಸ್ ನಾಯಕ ನಾಗರಾಜ ಗೌರಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಗರದಲ್ಲಿ ಸಾರ್ವಜನಿಕ ಬಾವಿ ಕಾಣೆಯಾಗಿದೆ. ಹುಡುಕಿಕೊಡಿ ಎಂದು ಧಾರವಾಡ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಷ್ಟೇ ಅಲ್ಲ ದೂರು ಸ್ವೀಕರಿಸದೇ ಇದ್ದಲ್ಲಿ ಲೋಕಾಯುಕ್ತ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಜ್ಯೋತಿಷಿಯೊಬ್ಬರು ಹೇಳಿದ ಮಾತಿನಂತೆ ಬಾವಿ ಮುಚ್ಚಿಸಿದ್ದಾರೆ. ನೀವೂ ಬಾವಿಯನ್ನು ಮುಚ್ಚಿದರೆ ಮುಂದೆ ಮುಖ್ಯಮಂತ್ರಿಯಾಗುತ್ತೀರಿ ಎಂದು ಹೇಳಿದ್ದರಂತೆ. ಸ್ಥಳೀಯರು ಕೂಡ ಇದನ್ನೇ ಆರೋಪಿಸುತ್ತಿದ್ದಾರೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡುವುದಕ್ಕೆ ಶಾಸಕರು ಹಿಂದೇಟು ಹಾಕುತ್ತಿದ್ದಾರೆ. ನೀವೂ ಬಾವಿಯನ್ನು ಹುಡುಕಿಕೊಡಿ ಎಂದು ಕಾಂಗ್ರೆಸ್ ನಾಯಕ ದೂರು ನೀಡಿದ್ದಾರೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಬೆಲ್ಲದ್, ಯಾರೋ ಏನೋ ಹೇಳುತ್ತಾರೆ ಅಂತ ಎಲ್ಲದಕ್ಕೂ ಪ್ರತಿಕ್ರಿಯೆ ನೀಡುವುದಕ್ಕೆ ಆಗಲ್ಲ. ನೋ ಕಮೆಂಟ್ಸ್ ಎಂಬ ಉತ್ತರ ನೀಡಿ ಜಾರಿಕೊಂಡಿದ್ದಾರೆ. ಇನ್ನು ಧಾರವಾಡದ ಸರ್ವೆ ನಂಬರ್ 31/1ರಲ್ಲಿ ಸಾರ್ವಜನಿಕ ಬಾವಿ ಇದ್ದ ದಾಖಲೆ ಇದ್ದು, ಸದ್ಯ ಆ ಜಾಗದಲ್ಲಿ ಈಗ ಬಾವಿ ಕಾಣೆಯಾಗಿದೆ.