ಬೆಂಗಳೂರು: ನಗರದ ವರ್ತೂರು ಕೆರೆ ಕೋಡಿ ಬಿದ್ದಿರುವ ಹಿನ್ನೆಲೆ ಶಾಸಕ ಅರವಿಂದ ಲಿಂಬಾವಳಿ ಅವರು ಕೆರೆ ಬಳಿ ಭೇಟಿ ನೀಡಿದ್ದರು. ಈ ವೇಳೆ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆ ವಿರುದ್ಧ ಅವಾಚ್ಯ ಶಬ್ದಗಳನ್ನು ಉಪಯೋಗಿಸಿ, ಎಳೆದಾಡಿದ ಆರೋಪ ಕೇಳಿ ಬಂದಿತ್ತು. ಇದೋಗ ಅದಕ್ಕೆ ಉತ್ತರ ನೀಡಿರುವ ಅರವಿಂದ ಲಿಂಬಾವಳಿ, ಆಕೆಯೇ ಜೋರು ಧ್ವನಿಯಲ್ಲಿ ಮಾತನಾಡಿದ್ದು ಎಂದಿದ್ದಾರೆ.
ಆಕೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಮಳೆಯಾದಾಗಲೂ ಖಾಲಿ ಮಾಡಲು ಸೂಚನೆ ನೀಡಲಾಗಿತ್ತು. ಎಷ್ಟು ಹೇಳಿದರು ಜಾಗ ಬಿಟ್ಟುಕೊಡುತ್ತಿಲ್ಲ. ಒತ್ತುವರಿ ಮಾಡಿಕೊಂಡಿದ್ದ ಮೂವರು ಅದಾಗಲೇ ಖಾಲಿ ಮಾಡಿದ್ದಾರೆ. ಆದರೆ ಆ ಮಹಿಳೆ ಬಿಡುತ್ತಿಲ್ಲ ಎಂದಿದ್ದಾರೆ.
ವರ್ತೂರು ಕೆರೆ ಕೋಡಿ ಬಿದ್ದ ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಮಳೆಹಾನಿ ಪ್ರದೇಶ ವೀಕ್ಷಣೆಗೆಂದು ಶಾಸಕ ಅರವಿಂದ ಲಿಂಬಾವಳಿ ಹೋಗಿದ್ದರು. ಈ ವೇಳೆ ಮಹಿಳೆಯೊಬ್ಬರು ಮನವಿ ಪತ್ರ ತಂದಿದ್ದರು. ಗರಂ ಆದ ಅರವಿಂದ ಲಿಂಬಾವಳಿ ಆ ಪತ್ರವನ್ನು ಕಸಿದು ಕೊಂಡಿದ್ದರು. ಹೇ ಮುಚ್ಚು ಬಾಯಿ, ಹೇ ಎತ್ತಾಕಿಕೊಂಡೋ ಹೋಗ್ರೋ ಎಂದೆಲ್ಲಾ ಮಾತನಾಡಿದ್ದರು. ಇನ್ನು ಈ ರೀತಿ ನಿಂದನೆಗೆ ಒಳಗಾದ ಮಹಿಳೆ ಮೇಲೆಯೆ ವೈಟ್ ಫೀಲ್ಡ್ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಎಫ್ಐಆರ್ ಹಾಕಿದ್ದಾರೆ.