ಸುದ್ದಿಒನ್, ಗುಬ್ಬಿ, ಜುಲೈ. 27 : ಶ್ರೀ ಚಾಮುಂಡೇಶ್ವರಿ ಅಮ್ಮನವರ ಜನ್ಮ ವರ್ಧಂತಿ ಮಹೋತ್ಸವ ಅಂಗವಾಗಿ ಬೆಂಗಳೂರಿನ ಶ್ರೀ ಅಣ್ಣಮ್ಮದೇವಿ ಆಹ್ವಾನ ನೀಡಿದ್ದ ಅಡಗೂರು ಹನುಮಂತಪುರ ಗ್ರಾಮಸ್ಥರು ದೇವಿ ಆಗಮನವನ್ನು ಅದ್ದೂರಿಯಾಗಿ ಮೆರವಣಿಗೆ ಮೂಲಕ ಭಕ್ತಿ ಪ್ರದರ್ಶಿಸಿದರು.
ಕಳೆದ ಏಳು ವರ್ಷದಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಜನ್ಮ ವರ್ಧಂತಿ ಮಹೋತ್ಸವ ನಡೆಸುತ್ತಿರುವ ಧರಣೇಶ್ ಯುವಕ ತಂಡ ಪ್ರತಿ ಮೂರು ವರ್ಷಕ್ಕೊಮ್ಮೆ ಶಕ್ತಿ ಪೀಠಗಳ ಅಮ್ಮನವರನ್ನು ಆಹ್ವಾನಿಸಿ ಭಕ್ತಿ ಸಮರ್ಪಣೆ ಮಾಡುವ ಕಾರ್ಯ ನಡೆಸಿಕೊಂಡು ಬಂದಿದ್ದು ಈ ಬಾರಿ ಬೆಂಗಳೂರಿನ ಶ್ರೀ ಅಣ್ಣಮ್ಮದೇವಿ ಆಹ್ವಾನಿಸಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಸಲಾಯಿತು.
ಶುಕ್ರವಾರ ಸಂಜೆ ಅಡಗೂರು ಹನುಮಂತಪುರಕ್ಕೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಜೊತೆಗೆ ಅದ್ದೂರಿ ಮೆರವಣಿಗೆ ನಡೆಸಿ ನಂತರ ಪ್ರತಿಷ್ಠಾಪಿಸಿ ಶನಿವಾರ ಬೆಳಿಗ್ಗೆ ಕುಂಕುಮಾರ್ಚನೆ, ಪುಷ್ಪಾರ್ಚನೆ ಸೇವೆ ಸಲ್ಲಿಸಿ ಇಡೀ ದಿನ ನಿರಂತರ ಅನ್ನ ಪ್ರಸಾದ ವಿನಿಯೋಗ ಮಾಡಲಾಯಿತು. ಸಂಜೆ 6 ಗಂಟೆಗೆ ಮುತ್ತಿನ ಹೂವಿನ ಪಲ್ಲಕ್ಕಿ ಉತ್ಸವ ಇಡೀ ಗ್ರಾಮದಲ್ಲಿ ಸಂಚರಿಸಲಿದೆ. ಕಲಾ ತಂಡಗಳು, ನಾಸಿಕ್ ಡೋಲ್, ಚಿಟ್ಟಿ ಮೇಳ ಹಾಗೂ ಬಾಣ ಬಿರುಸಿನ ಮದ್ದು ಪ್ರದರ್ಶನ ಆಕರ್ಷಣೀಯವಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್, ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಪಟೇಲ್ ಚನ್ನಬಸವೇಗೌಡ, ಶಿವಕುಮಾರ್, ತಾಪಂ ಮಾಜಿ ಸದಸ್ಯ ಕರೇತಿಮ್ಮಯ್ಯ, ಅರ್ಚಕ ರಾಜುಶಾಸ್ತ್ರಿ, ಯುವಕ ಸಂಘದ ಧರಣೇಶ್, ರವೀಶ್, ಉಮೇಶ್, ಶ್ರೀನಿವಾಸ್, ಮಂಜುನಾಥ್, ಮನೋಜ್, ವೆಂಕಟೇಗೌಡ, ರಾಜು ಹಾಗೂ ಅಡಗೂರು ಹನುಮಂತಪುರ ಗ್ರಾಮಸ್ಥರು ಇದ್ದರು.