ಬೆಳಗಾವಿ: ಬಿಜೆಪಿಯ ನೂಪೂರ್ ಶರ್ಮಾ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದನ್ನು ಖಂಡಿಸಿ, ದೇಶಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಈ ಬೆನ್ನಲ್ಲೇ ಬೆಳಗಾವಿಯಲ್ಲಿ ನೂಪೂರ್ ಶರ್ಮಾ ಪ್ರತಿಕೃತಿಯನ್ನು ನಡುರಸ್ತೆಯಲ್ಲಿಯೇ ನೇಣಿಗೆ ಏರಿಸಿದ್ದರು. ಈ ಸಂಬಂಧ ಮಾರ್ಕೆಟ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಬೆಳಗ್ಗೆ ಏಳು ಗಂಟೆ ಸುಮಾರಿಗೆ, ಫೋರ್ಟ್ ರಸ್ತೆಯ ಪಿಂಪಲ್ ಕಟ್ಟಾ ಬಳಿ ನೂಪೂರ್ ಶರ್ಮಾ ಪ್ರತಿಕೃತಿಯನ್ನು ನೇಣು ಹಾಕಿದ್ದರು. ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಮೂವರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಶೋಯೆಬ್, ಅರ್ಬಾಜ್ ಮೊಕಾಶಿ, ಅಮನ್ ಮೊಕಾಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ ನೂಪೂರ್ ಶರ್ಮಾ ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಹೇಳಿಕೆಯಿಂದ ಪ್ರತಿಭಟನೆಗಳು ಆರಂಭವಾಗಿವೆ. ಉತ್ತರ ಪ್ರದೇಶ ಮತ್ತು ಒಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಬೆಳಗಾವಿಯಲ್ಲಿ ಈ ಹೇಳಿಕೆ ಖಂಡಿಸಿ ಎಸ್ಡಿಪಿಐ ಸಂಘಟನೆ ಪ್ರತಿಭಟಿಸಿದ್ದು, ಬಂಧಿಸುವಂತೆ ಒತ್ತಾಯ ಹಾಕಿದ್ದಾರೆ.