ದಸರಾದಲ್ಲಿ 22 ವರ್ಷ ಕ್ಯಾಪ್ಟನ್ ಆಗಿದ್ದ ಅರ್ಜುನ ನಿಧನ..!

suddionenews
2 Min Read

ನಾಡ ಹಬ್ಬ ದಸರಾ ಹಬ್ಬ ನೋಡಲು ಇಡೀ ರಾಜ್ಯವೇ ಕಾಯುತ್ತಾ ಇರುತ್ತದೆ. ದಸರಾ ಹಬ್ಬಕ್ಕೂ ಮುನ್ನವೇ ವಾರ ಗಟ್ಟಲೆಯಿಂದ ಮೈಸೂರಿನಲ್ಲಿ ತಯಾರಿ ನಡೆಯುತ್ತಾ ಇರುತ್ತದೆ. ಈ ತಯಾರಿಯಲ್ಲಿ ಆನೆಗಳ ತರಬೇತಿ ಕೂಡ ಒಂದು. ದಸರಾ ಹಬ್ಬದಲ್ಲಿ ಅಂಬಾರಿಯಲ್ಲಿ ಭಾಗಿಯಾಗುವ ಆನೆಗಳನ್ನು ನೋಡುವುದೇ ಚೆಂದ. ಸತತ 22 ವರ್ಷಗಳ ಕಾಲ ದಸರಾದಲ್ಲಿ ಭಾಗಿಯಾಗಿದ್ದ ಅರ್ಜುನ ಇಂದು ಅಸುನೀಗಿದ್ದಾನೆ. ಕಾಡಾನೆ ಜೊತೆಗೆ ಕಾದಾಟದಲ್ಲಿ ಕ್ಯಾಪ್ಟನ್ ಅರ್ಜುನ ವೀರಮರಣ ಹೊಂದಿದ್ದಾನೆ. ದಸರಾದಲ್ಲಿ ಕ್ಯಾಪ್ಟನ್ ಆಗಿ ಅಂಬಾರಿ ಹೊತ್ತಿದ್ದ ಅರ್ಜುನನ ಸಾವಿಗೆ ಕನ್ನಡಿಗರು ಕಂಬನಿ ಮಿಡಿದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅರ್ಜುನನ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. ಫೋಟೋ ಹಾಕಿ ಸಂತಾಪ ಸೂಚಿಸುತ್ತಿದ್ದಾರೆ. 1960ರಲ್ಲಿ ಜನಿಸಿದ್ದ ಅರ್ಜುನನಿಗೆ 63 ವರ್ಷ ವಯಸ್ಸಾಗಿತ್ತು. 1968ರಲ್ಲಿ ಕಾಕನಕೋಟೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರ್ಜುನನ್ನು ಸೆರೆ ಹಿಡಿಯಲಾಗಿತ್ತು. ಮಾವುತರು ಅರ್ಜುನನ್ನು ಚೆನ್ನಾಗಿ ಪಳಗಿಸಿದ ನಂತರ 1990ರಲ್ಲಿ ಅರ್ಜುನನ್ನು ಮೈಸೂರಿನ ದಸರಾ ಉತ್ಸವದ ಶಿಬಿರಕ್ಕೆ ಕರೆತರಲಾಗಿತ್ತು. ಆನೆ ದ್ರೋಣ, ಬಲರಾಮನ ಬಳಿಕ ಅರ್ಜುನನೇ ಚಿನ್ನದ ಅಂಬಾರಿಯನ್ನು ಹೊತ್ತು ದಸರಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದ. ಅರ್ಜುನ 6040 ಕೆಜಿ ತೂಕ ಹೊಂದಿದ್ದು, 2.95 ಮೀಟರ್ ಉದ್ದ ಇದ್ದ. ಕ್ಯಾಪ್ಟನ್ ಅರ್ಜುನ ಸತತ 22 ವರ್ಷದಿಂದ ವಿಶ್ವವಿಖ್ಯಾತ ದಸರಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ.

ರಾಜಕಾರಣಿಗಳು ಕೂಡ ಅರ್ಜುನನ ಸಾವಿಗೆ ಕಂಬನಿ ಮಿಡಿದಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆಗಳ ಸೆರೆಗೆ ನಡೆಸಿದ ಕಾರ್ಯಾಚರಣೆ ವೇಳೆ ಒಂಟಿ ಸಲಗದ ದಾಳಿಗೆ ತುತ್ತಾಗಿ ಸಾಕಾನೆ ಅರ್ಜುನ ವೀರಮರಣ ಹೊಂದಿದ ಘಟನೆ ತಿಳಿದು ಬಹಳ ನೋವುಂಟಾಯಿತು. ದಸರಾ ಅಂಬಾರಿಯನ್ನು ಹೊತ್ತು ಸಾಗಿದ್ದ ಅರ್ಜುನ ಇನ್ನು ನೆನಪಷ್ಟೇ.

 

ಸ್ಥಳಾಂತರ ಕಾರ್ಯಾಚರಣೆ ವೇಳೆ ಸಾಕಾನೆಗಳು-ಕಾಡಾನೆಗಳ ನಡುವಿನ ಭೀಕರ ಕಾಳಗದ ವೇಳೆ ಇತರೆ ಸಾಕಾನೆಗಳು ಪಲಾಯನ ಮಾಡಿದರೆ, ಅರ್ಜುನ ಮಾತ್ರ ಒಂಟಿ ಸಲಗದ ಜತೆ ವಿರೋಚಿತವಾಗಿ ಸೆಣಸಾಡಿತ್ತು. ಇಂಥ ವಿರೋಚಿತ ಆನೆ ಸಾವನ್ನಪ್ಪಿರುವುದು ಅತ್ಯಂತ ದುಃಖದ ಸಂಗತಿ. ಕಾಡಾನೆಗಳನ್ನು ಸೆರೆ ಹಿಡಿಯುವಾಗ ತಮ್ಮ ಪ್ರಾಣ ರಕ್ಷಣೆಯ ಜತೆಗೆ ವನ್ಯಮೃಗಗಳ ಜೀವಕ್ಕೆ ಹಾನಿ ಆಗದಂತೆ ಅರಣ್ಯ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಲಿ. ಅರ್ಜುನನ ಆತ್ಮಕ್ಕೆ ಚಿರಶಾಂತಿ ಸಿಗಲಿ. ಆ ತಾಯಿ ಚಾಮುಂಡೇಶ್ವರಿ ಸದ್ಗತಿ ಕರುಣಿಸಲಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *