ಬೆಂಗಳೂರು: ಗೋವಿಂದ ಕಾರಜೋಳ ಅವರ ಮೇಲೆ ಚಿತ್ರದುರ್ಗದಲ್ಲಿ ಮಾತಿನ ಚಕಮಕಿ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ, ಬಿಜೆಪಿ ರಾಜ್ಯ ವಕ್ತಾರ ಮತ್ತು ಮಾಜಿ ಶಾಸಕ ಪಿ ರಾಜೀವ್ ಅವರು ಪ್ರತಿಕ್ರಿಯೆ ನೀಡಿದ್ದು, ಹಲ್ಲೆ ನಡೆಸುವುದಕ್ಕೆ ದುಷ್ಟ ಪ್ರೇರಣೆ ನೀಡಿ, ಒಳ ಸಂಚನ್ನು ಮಾಡಲಾಗಿದೆ. ಇದರ ಹಿಂದೆ ಡಾ. ಹೆಚ್ ಸಿ ಮಹದೇವಪ್ಪ ಹಾಗೂ ಪ್ರಿಯಾಂಕ್ ಖರ್ಗೆ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ದಲಿತರಿಗೆ ಮೀಸಲಿಟ್ಟ ಹಣವನ್ನು ಈ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಇದು ದಲಿತರಿಗೆ ಅರ್ಥವಾದರೆ ದೊಡ್ಡ ಕ್ರಾಂತಿಯಾಗುವ ಭಯ ಕಾಂಗ್ರೆಸ್ ಸರ್ಕಾರವನ್ನು ಕಾಡುತ್ತಿದೆ. ದಲಿತರಿಗೆ ಈ ವಿಚಾರ ಗೊತ್ತಾಗಬಾರದು, ಯಾರೂ ಈ ವಿಚಾರವನ್ನು ತಿಳಿಸಬಾರದು ಎಂಬ ದುರುದ್ದೇಶದೊಂದಿಗೆ ಕಾಂಗ್ರೆಸ್ ಪಕ್ಷವು ಗೋವಿಂದ ಕಾರಜೋಳರ ಹಲ್ಲೆಗೆ ಪ್ರೇರಣೆ ನೀಡಿದೆ ಎಂದು ಆರೋಪಿಸಿದೆ.
ಗೃಹಜ್ಯೋತಿ ಯೋಜನೆಯಡಿ ಎಸ್‍ಇಪಿಟಿಎಸ್‍ಪಿಯಡಿ 2,400 ಕೋಟಿ ಇಟ್ಟಿದ್ದಾರೆ. ಅದೇರೀತಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯಡಿ 2,800 ಕೋಟಿ ಇಟ್ಟಿದ್ದಾರೆ. ಈ 2,800 ಕೋಟಿ ಹಣದಲ್ಲಿ ಶೇ 90 ದಲಿತರಿಗೆ ಪ್ರಯೋಜನ ಸಿಗುತ್ತದೆ. ಹಾಗಿದ್ದರೆ 2400 ಕೋಟಿಯನ್ನು ಮತ್ತೆ ಇಟ್ಟಿದ್ಯಾಕೆ. ಇದೆಲ್ಲವೂ ದಲಿತ ಸಮುದಾಯ, ದಲಿತ ಮುಖಂಡರಿಗೆ ತಿಳಿದರೆ ಈ ಸರಕಾರವು ಸುಮಾರು 10 ಸಾವಿರ ಕೋಟಿ ಹಣವನ್ನು ದಲಿತ ಸಮುದಾಯಕ್ಕಾಗಿ ಮತ್ತೆ ಕೊಡಬೇಕಾಗುತ್ತದೆ. ಅದೇ ಭಯ ಸಿದ್ದರಾಮಯ್ಯರನ್ನೂ ಕಾಡುತ್ತಿದೆ. ದಲಿತರು ಜಾಗೃತ ಆಗಬಾರದು. ಈ ಸಂಬಂಧ ತಿಳಿವಳಿಕೆ ಕೊಡುವ ಕೆಲಸವನ್ನು ಮಾಡಬಾರದೆಂಬ ಉದ್ದೇಶದಿಂದ ಭಯ ಹುಟ್ಟಿಸಲು ಮಾಜಿ ಉಪ ಮುಖ್ಯಮಂತ್ರಿಗಳು ಮತ್ತು ದಲಿತ ಸಮುದಾಯದ ದೊಡ್ಡ ನಾಯಕ ಗೋವಿಂದ ಕಾರಜೋಳ ಅವರ ಮೇಲೆ ಹಲ್ಲೆ ಮಾಡಿ, ಆ ಮೂಲಕ ದಲಿತ ಜಾಗೃತ ಮನಸ್ಸುಗಳಿಗೆ ಸಂದೇಶ ಕೊಡಲು ಹೊರಟಿದ್ದರು ಎಂದಿದ್ದಾರೆ.