ಚಿತ್ರದುರ್ಗ : ಮಡಿಕೇರಿಯಲ್ಲಿ ನೆರೆಹಾನಿ ಪ್ರದೇಶ ಭೇಟಿಗೆ ಹೋದಾಗ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ವಿಪಕ್ಷ ನಾಯಕ ಸಿದ್ಧರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದಾರೆ. ಈ ಘಟನೆ ಬಗ್ಗೆ ಬಿಜೆಪಿ ಶಾಸಕ ಭೋಪಯ್ಯ, ಕಾಂಗ್ರೆಸ್ ಕಾರ್ಯಕರ್ತರೇ ಮೊಟ್ಟೆ ಎಸೆದದ್ದು ಎಂದು ಹೇಳಿದ್ದಾರೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗರಂ ಆಗಿದ್ದು, ಮೊದಲು ಭೋಪಯ್ಯನನ್ನು ಬಂಧಿಸಿ ಎಂದಿದ್ದಾರೆ.
ಚಳ್ಳಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ಆ ಬಿಜೆಪಿ ಶಾಸಕ ಭೋಪಯ್ಯನ ಬಂಧಿಸಬೇಕು ಎಂದು ಆಗ್ರಹಿಸಿದರು. ಸುಳ್ಳಿನ ಮತ್ತೊಂದು ಹೆಸರೇ ಬಿಜೆಪಿ, ಬಿಜೆಪಿ ಶಾಸಕರು. ನಾನು ಮಾಡಿದ್ದರೆ ನಾನು ಎಂದು ಹೇಳಿಕೊಳ್ಳಬೇಕು. ಕಾರ್ಯಕರ್ತರು ಎಂದು ಹೇಳಿಕೊಳ್ಳಬೇಕು. ಅದನ್ನು ಬಿಟ್ಟು ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆಂದು ಹೇಳುವುದು ಹೇಡಿತನ ಎಂದು ಬೋಪಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ವಿರೋಧವಿದ್ದ ಕಡೆ ಸಿದ್ಧರಾಮಯ್ಯ ಯಾಕೆ ಹೋಗಬೇಕು ಎಂದ ಪ್ರತಾಪ್ ಸಿಂಹ ವ್ಯಂಗ್ಯಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ ಓಹೋಹೋ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಲ್ಯಾಂಡ್ ಓನರಾ..? ಮಡಿಕೇರಿ ಏನು ಅವರ ಮನೇನಾ ಎಂದು ಪ್ರಶ್ನಿಸಿದ್ದಾರೆ.
ಈ ಘಟನೆ ಖಂಡಿಸಿ ಕಾಂಗ್ರೆಸ್ ನಿಂದ ಮಡಿಕೇರಿ ಚಲೋ ನಡೆಸುವ ಬಗ್ಗೆ ಮಾತನಾಡಿ, ಇನ್ನೂ ಆ ಬಗ್ಗೆ ಚರ್ಚಿಸಿಲ್ಲ. ನಾನು ಬೆಂಗಳೂರು ಹೋದ ಬಳಿಕ ಚರ್ಚೆ ಮಾಡುತ್ತೇನೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ತಾವಾಗೇ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.