ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಯಡಿಯೂರಪ್ಪ ಅವರ ಕುಟುಂಬದ ಮೇಲೆ ಗರಂ ಆಗ್ತಾನೆ ಇರ್ತಾರೆ. ಹೈಕಮಾಂಡ್ ನಿಂದ ಎಚ್ಚರಿಕೆ ಕೊಟ್ಟರು, ನೋಟೀಸ್ ನೀಡಿದರು ಯತ್ನಾಳ್ ಅವರು ಅದ್ಯಾಕೋ ಬದಲಾದಂತೆ ಕಾಣಿಸ್ತಾ ಇಲ್ಲ. ಈಗ ಮತ್ತೆ ಯಡಿಯೂರಪ್ಪ ಅವರ ಕುಟುಂಬಸ್ಥರ ಮೇಲೆ ಗರಂ ಆಗಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಯತ್ನಾಳ್ ಅವರು, ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾಗಬೇಕು. ನಾವೂ ಹೋರಾಟ ಮಾಡುತ್ತಿರುವುದೇ ಈ ಕಾರಣಕ್ಕೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಪಕ್ಷದಲ್ಲಿ ವಂಶವಾದ ಹಾಗೂ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ ಎಂದು ಹೇಳಿದ್ದಾರೆ. ವಿಜಯೇಂದ್ರ ಒಬ್ಬನನ್ನೇ ಬಿಟ್ಟು ಯಾರನ್ನೇ ರಾಜ್ಯಾಧ್ಯಕ್ಷ ಮಾಡಿದರು ಸಮಸ್ಯೆ ಇಲ್ಲ ಎಂಬುದನ್ನ ಹೇಳಿದ್ದಾರೆ. ಈ ಮೊದಲಿನಿಂದಲು ಬಸವನಗೌಡ ಪಾಟೀಲ್ ಯತ್ನಾಳ್ ಅವರು ಇದೇ ವಿಚಾರವನ್ನ ಹೇಳ್ತಾ ಇದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಈ ಸ್ಥಾನದಿಂದ ಕೆಳಗಿಳಿಸಿ ಎನ್ನುತ್ತಿದ್ದಾರೆ.
ಒಡೆದ ಮನಸ್ಸುಗಳು ಒಂದಾಗಬೇಕಾದರೆ ಒಳ್ಳೆಯ ನಾಯಕತ್ವ ಬೇಕು. ನಾಯಕತ್ವವೇ ಸರಿಯಿಲ್ಲದಿದ್ದರೆ ಯಾರು ಒಂದಾಗಿ ಏನು ಪ್ರಯೋಜನ..? ಯಡಿಯೂರಪ್ಪ ಮತ್ತು ವಿಜಯೇಂದ್ರ ತಾವೂ ರೈತನ ಮಕ್ಕಳು ಅಂತ ಹೇಳುತ್ತಾರೆ. ಹಾಗಾದ್ರೆ ನಾವೆಲ್ಲಾ ಯಾರು..? ನಾವೇನು ಎಮ್ಮೆಯ ಮಕ್ಕಳೇ..? ಸ್ವಗ್ರಾಮ ಯತ್ನಾಳ್ ನಲ್ಲಿ ನಮ್ಮದು ಒಕ್ಕಲುತನವಿದೆ. ನಾವೂ ರೈತನ ಮಕ್ಕಳು, ಯಾವತ್ತೂ ನೇಗಿಲು ಮುಟ್ಟದವರು ರೈತನ ಮಕ್ಕಳು ಹೇಗಾವುತ್ತಾರೆ ಎಂದು ಯತ್ನಾಳ್ ಅವರು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹ ಮಾಡಿದ್ದಾರೆ. ಬೇರೆ ಯಾರನ್ನೇ ಮಾಡಿದರು ಚಿಂತೆ ಇಲ್ಲ. ಆದರೆ ವಿಜಯೇಂದ್ರ ಅವರನ್ನು ಆ ಸ್ಥಾನದಿಂದ ಇಳಿಸಿ ಎಂದಿದ್ದಾರೆ.
