ಬೆಂಗಳೂರು: ಅಪ್ಪು ನೋಡೋದಕ್ಕೆ ಅದೆಷ್ಟು ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ರು. ಅವರ ಹುಟ್ಟುಹಬ್ಬ ಅಂದ್ರೆ ತಿಂಗಳ ಮುನ್ನವೇ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡು ಅಪ್ಪು ನೋಡೋದಕ್ಕೆ ತಯಾರಾಗ್ತಾ ಇದ್ರು ಅಭಿಮಾನಿ ಗಣ. ಆದ್ರೆ ಅಪ್ಪು ಇನ್ನಿಲ್ಲ ಅನ್ನೋದನ್ನ ಜೀರ್ಣಿಸಿಕೊಳ್ಳೋದಕ್ಕೂ ಅಭಿಮಾನಿಗಳಿಗೆ ಮಾತ್ರವಲ್ಲ ಸಾಮಾನ್ಯ ಜನರಿಗೂ ಅದು ಕಷ್ಟ. ಯಾಕಂದ್ರೆ ಪುನೀತ್ ಅಂದ್ರೆ ಇಂಥವರಿಗೆ ಇಷ್ಟವಿಲ್ಲ ಅನ್ನೋ ಹಾಗೇ ಇಲ್ಲ. ಒಂದಲ್ಲ ಒಂದು ವಿಚಾರಕ್ಕೆ ಎಲ್ಲರಿಗೂ ಇಷ್ಟವಾಗ್ತಾ ಇದ್ರು. ಅಂಥ ರಾಜಕುಮಾರ ಇಂದು ಎಲ್ಲರಿಂದಲೂ ದೂರವಾಗಿದ್ದಾರೆ.
ಈಗಾಗಲೇ 5 ದಿನದ ಹಾಲು ತುಪ್ಪ ಕಾರ್ಯವನ್ನ ಮನೆಯವರು ಮುಗಿಸಿದ್ದಾರೆ. 11ನೇ ದಿನದ ಕಾರ್ಯವನ್ನ ಮಾಡಬೇಕಿದೆ. ಹೀಗಾಗಿ ಅಂದು ಅಭಿಮಾನಿಗಳಿಗೆಲ್ಲಾ ಅನ್ನದಾನ ಮಾಡಲು ನಿರ್ಧರಿಸಲಾಗಿದೆ.
11ನೇ ದಿನದ ಕಾರ್ಯವನ್ನ ಸೋಮವಾರ ಮಾಡಲಾಗುತ್ತಿದ್ದು, ಅದಕ್ಕೆ ರಾಜ್ ಕುಟುಂಬ ಹಾಗೂ ಚಿತ್ರರಂಗದ ಗಣ್ಯರು ಹಾಗೂ ಆತ್ಮೀಯರಿಗಷ್ಟೇ ಅವಕಾಶ ನೀಡಲಾಗಿದೆ. ಆ ಬಳಿಕ 12ನೇ ದಿನಕ್ಕೆ ಅಭಿಮಾನಿಗಳಿಗಾಗಿ ಪ್ಯಾಲೇಸ್ ಗ್ರೌಂಡ್ ನಲ್ಲಿ ಕಾರ್ಯಕ್ರಮವನ್ನ ಇಟ್ಟುಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಅಪ್ಪುಗೆ ಪುಷ್ಪನಮನ ಸಲ್ಲಿಸಲಿದ್ದು, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಪ್ಪುಗೆ ನಮನ ಸಲ್ಲಿಸಬಹುದು.