ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.10 : ರೆಕಾರ್ಡ್ ರೂಂಗಳಲ್ಲಿ ಹಳೆ ದಾಖಲೆಗಳನ್ನು ಸ್ಕ್ಯಾನ್ ಮಾಡಿ ದಾಖಲೆಗಳನ್ನು ಉಳಿಸಲಾಗುವುದು. ಇದರಿಂದ ಜನರಿಗೆ ಸುಲಲಿತವಾಗಿ ದಾಖಲೆಗಳು ಸಿಗುವಂತಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಜಿಲ್ಲೆಯ ಬರ ಪರಿಸ್ಥಿತಿಯನ್ನು ವೀಕ್ಷಿಸಿ ಗ್ರಾಮ ಲೆಕ್ಕಾಧಿಕಾರಿ, ನಾಡ ಕಚೇರಿ, ತಾಲ್ಲೂಕು ಕಚೇರಿಗೆ ಭೇಟಿ ನೀಡಿದಾಗ ಕೆಲವು ಕಡೆ ಹಳೆ ದಾಖಲೆಗಳು ಪುಡಿ ಪುಡಿಯಾಗಿರುವುದು ಕಂಡು ಬಂದಿತು. ಅದಕ್ಕಾಗಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಂರಕ್ಷಿಸಲಾಗುವುದು. ಒಂದು ವೇಳೆ ದಾಖಲೆಗಳು ಕಳೆದರೆ ನೈಜ ರೈತರು ತೊಂದರೆ ಅನುಭವಿಸಿದಂತಾಗಿ ಬೋಗಸ್ ದಾಖಲೆಗಳನ್ನು ಸೃಷ್ಠಿಸುವವರಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಜನಸಾಮಾನ್ಯರು, ರೈತರು ಕಂದಾಯ ಇಲಾಖೆಗೆ ಸುತ್ತುವುದನ್ನು ತಪ್ಪಿಸುವುದು ನಮ್ಮ ಉದ್ದೇಶ. ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ವೇಗವಾಗಿ ಕೆಲಸವಾಗಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಬಿಜೆಪಿ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿರುವುದೇ ಕಾಂಗ್ರೆಸ್ ನಾಯಕರುಗಳಿಗೆ ತೊಂದರೆ ಕೊಡುವುದಕ್ಕಾಗಿ ಎನ್ನುವುದು ಗೊತ್ತಾಗಿದೆ. ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಿ ಅಧಿಕಾರ ನೀಡಿದ್ದಾರೆ. ಎಲ್ಲಾ ಸವಾಲು, ಸಮಸ್ಯೆಗಳನ್ನು ಎದುರಿಸಲು ಸಿದ್ದರಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೆ ಉಚಿತ ಗ್ಯಾರೆಂಟಿಗಳನ್ನು ಘೋಷಿಸಿರುವುದು ಬಿಜೆಪಿ. ಮತ್ತು ಜೆಡಿಎಸ್.ಗೆ ಕಣ್ಣು ಕುಕ್ಕುತ್ತಿದೆ. ಬಡವರು, ರೈತರು, ದುಡಿಯುವವರ ಪರ ನಮ್ಮ ಸರ್ಕಾರವಿರುವುದನ್ನು ನೋಡಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸೇಡಿನ ರಾಜಕಾರಣ ಮಾಡುತ್ತಿದ್ದಾರೆಂದರು.
ಡಿಸೆಂಬರ್, ಜನವರಿ ಒಳಗೆ ಒಂದುವರೆ ಸಾವಿರ ಗ್ರಾಮ ಲೆಕ್ಕಾಧಿಕಾರಿಗಳು, ಒಂದು ಸಾವಿರ ಸರ್ವೆಯರ್‍ಗಳನ್ನು ನೇಮಕ ಮಾಡಿಕೊಳ್ಳಲಾಗುವುದು. 357 ಸರ್ಕಾರಿ ಸರ್ವೆಯರ್‍ಗಳು ಹಾಗೂ ಲೈಸೆನ್ಸ್ ಸರ್ವೆಯರ್‍ಗಳನ್ನು ನೇಮಕ ಮಾಡಲಾಗುವುದು ಎಂದರು.