ವಿಕಲಚೇತನರ ಬಸ್‍ಪಾಸ್‍ಗೆ ಅರ್ಜಿ ಆಹ್ವಾನ

2 Min Read

 

ಚಿತ್ರದುರ್ಗ. ಡಿ.23: ವಿಕಲಚೇತನ ಫಲಾನುಭವಿಗಳು ರಿಯಾಯಿತಿ ದರದ ಬಸ್‍ಪಾಸ್ (ಹೊಸ/ನವೀಕರಣ)ಗಳನ್ನು ಪಡೆಯಲು ಸೇವಾಸಿಂಧು ಆನ್‍ಲೈನ್ ವ್ಯವಸ್ಥೆಯಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಫೆಬ್ರವರಿ 28 ಅರ್ಜಿ ಸಲ್ಲಿಸಲು ಕೊನೆಯ ದಿನ.

 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ 2026ನೇ ಸಾಲಿನ ವಿಕಲಚೇತನರ ರಿಯಾಯಿತಿ ದರದ ಬಸ್‍ಪಾಸ್‍ಗಳನ್ನು 2025ರ ಡಿಸೆಂಬರ್ 30 ರಿಂದ ನವೀಕರಣವನ್ನು ಮಾಡಲು ಕ್ರಮಕೈಗೊಳ್ಳಲಾಗಿದೆ. ಫಲಾನುಭವಿಗಳು ವಿಕಲಚೇತನರ ಪಾಸ್ ನವೀಕರಿಸಿಕೊಳ್ಳಲು ಸೇವಾಸಿಂಧು ಪೋರ್ಟ್‍ಲ್ https://serviceonline.gov.in/karnataka/ ನಲ್ಲಿ ಘಟಕ ವ್ಯವಸ್ಥಾಪಕರ ಕೌಂಟರ್ ಐಡಿಗೆ ಅರ್ಜಿ ಸಲ್ಲಿಸುವುದು ಮತ್ತು ಹೊಸ ಪಾಸ್‍ಗಳನ್ನು ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಚಿತ್ರದುರ್ಗ ವಿಭಾಗ ಅವರ ಕೌಂಟರ್ ಐಡಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

ವಿಕಲಚೇತನ ರಿಯಾಯಿತಿ ಬಸ್ ಪಾಸ್‍ಗಳನ್ನು ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಾವಕಾಶ ನೀಡುವ ಉದ್ದೇಶದಿಂದ 2025ನೇ ಸಾಲಿನಲ್ಲಿ ವಿತರಿಸಲಾಗಿರುವ ಮತ್ತು 2025ರ ಡಿಸೆಂಬರ್ 31 ರವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸ್‍ಗಳನ್ನು 2026ರ ಫೆಬ್ರವರಿ 28 ರವರೆಗೆ ಮಾನ್ಯತೆ ಮಾಡಲಾಗುವುದು.

 

ಪಾಸ್ ನವೀಕರಣ ಮಾಡಿಸಿಕೊಳ್ಳಲು ಸಂಪರ್ಕಿಸಬೇಕಾದ ಪಾಸ್ ವಿತರಣಾ ಕೇಂದ್ರ ಮತ್ತು ತಾಲ್ಲೂಕುಗಳ ವಿವರ ಇಂತಿದೆ. ಚಿತ್ರದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕು ಫಲಾನುಭವಿಗಳಿಗೆ ಚಿತ್ರದುರ್ಗ ಬಸ್ ನಿಲ್ದಾಣದಲ್ಲಿ ಪಾಸ್ ವಿತರಿಸಲಾಗುವುದು. ಚಳ್ಳಕೆರೆ ತಾಲ್ಲೂಕು ಫಲಾನುಭವಿಗಳಿಗೆ ಚಳ್ಳಕೆರೆ ಬಸ್ ನಿಲ್ದಾಣ, ಹೊಸದುರ್ಗ ಫಲಾನುಭವಿಗಳಿಗೆ ಹೊಸದುರ್ಗ ಬಸ್ ನಿಲ್ದಾಣ, ಪಾವಗಡ ಫಲಾನುಭವಿಗಳಿಗೆ ಪಾವಗಡ ಬಸ್ ನಿಲ್ದಾಣ, ಹಿರಿಯೂರು ಫಲಾನುಭವಿಗಳಿಗೆ ಹಿರಿಯೂರು ಬಸ್ ನಿಲ್ದಾಣದ ಪಾಸ್ ವಿತರಣೆ ಕೇಂದ್ರದಲ್ಲಿ ಪಾಸ್ ನವೀಕರಿಸಲಾಗುವುದು.

ವಿಕಲಚೇತನ ಫಲಾನುಭವಿಗಳು 2026ರ ಫೆಬ್ರವರಿ 28ರ ಒಳಗಾಗಿ ನವೀಕರಣ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಫೆಬ್ರವರಿ 28ರ ನಂತರ ವಿಕಲಚೇತನರ ಪಾಸ್ ನವೀಕರಣಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಆನ್‍ಲೈನ್‍ನಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಯುಡಿಐಡಿ ಕಾರ್ಡ್, ಆಧಾರ್ ಕಾರ್ಡ್, ಡಿಸಬಿಲಿಟಿ ಸರ್ಟಿಫಿಕೇಟ್ ಮತ್ತು ಫೋಟೋ ಆಪ್‍ಲೋಡ್ ಮಾಡುವುದು ಕಡ್ಡಾಯವಾಗಿದೆ. ಫಲಾನುಭವಿಗಳು ಆನ್‍ಲೈನ್ ಮುಖಾಂತರ ದಾಖಲಾತಿಗಳನ್ನು ಅಪ್‍ಲೋಡ್ ಮಾಡಿದ್ದಾಗ್ಯೂ ಭೌತಿಕವಾಗಿ ಪಾಸ್ ಪಡೆಯಲು ಬಂದಾಗ ಮೂಲ ದಾಖಲೆಗಳು ಹಾಗೂ ಜೆರಾಕ್ಸ್ ಪ್ರತಿಯನ್ನು ಹಾಜರುಪಡಿಸಿ ವಿಕಲಚೇತನರ (ಹೊಸ/ನವೀಕರಣ) ಪಾಸ್‍ಗಳನ್ನು ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Share This Article
Enable Notifications OK No thanks