ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.09 : ಜನಪ್ರತಿನಿಧಿಗಳಾದವರಿಗೆ ಕ್ಷೇತ್ರದ ಅಭಿವೃದ್ದಿ ಬಗ್ಗೆ ಕಾಳಜಿ, ಕಳಕಳಿಯಿರಬೇಕೆಂದು ಮಾಜಿ ಸಂಸದ ಜನಾರ್ಧನಸ್ವಾಮಿ ಹೇಳಿದರು.
ಪ್ರಾದೇಶಿಕ ಭಾಷಾ ಗುಣಾತ್ಮಕ ಚಲನಚಿತ್ರಗಳ ಆಯ್ಕೆ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರತಿಷ್ಠಿತ ರಾಜಾವೀರ ಮದಕರಿನಾಯಕ ಪ್ರಶಸ್ತಿಗೆ ಭಾಜನರಾಗಿರುವ ಸಾಹಿತಿ ಡಾ.ಬಿ.ಎಲ್.ವೇಣು ರವರನ್ನು ಚಿತ್ರದುರ್ಗದ ಅವರ ನಿವಾಸದಲ್ಲಿ ಗುರುವಾರ ಸನ್ಮಾನಿಸಿ ಮಾತನಾಡಿದರು.
2009 ರಲ್ಲಿ ನಾನು ಸಂಸದನಾದಾಗ ನಮ್ಮ ಪಕ್ಷ ಅಧಿಕಾರದಲ್ಲಿರಲಿಲ್ಲ. ವಿರೋಧ ಪಕ್ಷದಲ್ಲಿದ್ದುಕೊಂಡು ಸಾವಿರಾರು ಕೋಟಿ ರೂ.ಗಳ ಅನುದಾನ ತಂದಿದ್ದೇನೆ. ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಅಂಟಿಕೊಂಡಿರುವುದನ್ನು ಅಳಿಸಿ ಹಾಕಬೇಕಾಗಿದೆ. ನೇರ ರೈಲು ಮಾರ್ಗ ಬೇಕು. ಏಳುಸುತ್ತಿನ ಚಿತ್ರದುರ್ಗದ ಕೋಟೆ ಹಾಳಾಗದಂತೆ ಸ್ಮಾರಕವನ್ನಾಗಿ ಸಂರಕ್ಷಿಸಬೇಕಿದೆ.
ಮುಖ್ಯವಾಗಿ ನೀರು, ಕೈಗಾರಿಕೆ ಇಲ್ಲದಿರುವುದು ಚಿತ್ರದುರ್ಗ ಜಿಲ್ಲೆ ಹಿಂದುಳಿಯಲು ಕಾರಣ. ನಮ್ಮ ಜಿಲ್ಲೆಯಲ್ಲೆ ಇದ್ದ ದಾವಣಗೆರೆ ಎಷ್ಟೊಂದು ಮುಂದುವರೆದಿದೆ. ಶಿವಮೊಗ್ಗ, ಬಳ್ಳಾರಿ, ತುಮಕೂರು ಈ ಜಿಲ್ಲೆಗಳನ್ನು ಯಾರು ಹಿಂದುಳಿದ ಜಿಲ್ಲೆ ಎಂದು ಕರೆಯುತ್ತಿಲ್ಲ. ಹಾಗಾಗಿ ಇಲ್ಲಿನ ಜನಪ್ರತಿನಿಧಿಗಳು ಜಿಲ್ಲೆಗೆ ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಡೆ ಗಮನ ಕೊಡಬೇಕಿದೆ ಎಂದರು.
ಚಳ್ಳಕೆರೆ ಸಮೀಪ ಡಿ.ಆರ್.ಡಿ.ಓ. ಆಗಿದೆ. ಎಷ್ಟೋ ಮಂದಿಗೆ ಇನ್ನು ಇದರ ವಿಶೇಷತೆ ಗೊತ್ತಿಲ್ಲ. ಗುಣಮಟ್ಟದ ಶಿಕ್ಷಣಕ್ಕೆ ಜಿಲ್ಲೆಯಲ್ಲಿ ಎಲ್ಲರೂ ಒತ್ತು ಕೊಡಬೇಕು ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಡಾ.ಬಿ.ಎಲ್.ವೇಣು ಚಿತ್ರದುರ್ಗ ಐತಿಹಾಸಿಕವಾಗಿ ಪ್ರಸಿದ್ದಿ ಪಡೆದಿದೆ ಎನ್ನುವುದನ್ನು ಬಿಟ್ಟರೆ ಬೇರೆ ಯಾವ ದೃಷ್ಟಿಯಲ್ಲೂ ಅಭಿವೃದ್ದಿಯಾಗಿಲ್ಲ. ಭದ್ರಾಮೇಲ್ದಂಡೆ ಯೋಜನೆಗಾಗಿ ಕಳೆದ ಮೂವತ್ತು ನಲವತ್ತು ವರ್ಷಗಳಿಂದಲೂ ಹೋರಾಟ ನಡೆಯುತ್ತಿದ್ದರೂ ಕಾಮಗಾರಿ ಮಾತ್ರ ಇನ್ನು ಪೂರ್ಣಗೊಂಡಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಜಿಲ್ಲೆಗೆ ನೀರು ಹರಿಯುತ್ತದೆ ಎನ್ನುವುದು ಯಾವ ಗ್ಯಾರೆಂಟಿ. ಚುನಾಯಿತ ಪ್ರತಿನಿಧಿಗಳಿಗೆ ಇಚ್ಚಾಶಕ್ತಿಯಿರಬೇಕು ಎಂದು ನುಡಿದರು.