ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ಯಾವುದೇ ಕ್ರೀಡೆಯಾಗಲಿ ಸ್ಪರ್ಧಾತ್ಮಕವಾಗಿರಬೇಕೆ ವಿನಃ ಸೋಲು-ಗೆಲುವು ಮುಖ್ಯವಲ್ಲ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಕ್ರೀಡಾಪಟುಗಳಿಗೆ ಕರೆ ನೀಡಿದರು.
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಹೋಬಳಿಯಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಕರಿಸಿದ್ದೇಶ್ವರ ಖೋ ಖೋ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಪುರುಷರ ಖೋ ಖೋ ಪಂದ್ಯಾವಳಿ ಉದ್ಗಾಟಿಸಿ ಮಾತನಾಡಿದರು.
ರಾಮಗಿರಿ ಗ್ರಾಮದ ಯುವಕರು ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿಯನ್ನು ಏರ್ಪಡಿಸಿ ಈ ಗ್ರಾಮವನ್ನು ರಾಜ್ಯಕ್ಕೆ ಪರಿಚಯಿಸಿರುವುದು ಅತ್ಯುತ್ತಮವಾದ ಕೆಲಸ. ಕ್ರೀಡಾಪಟುಗಳು ಸೋಲು-ಗೆಲುವಿಗೆ ಮಾನ್ಯತೆ ಕೊಡುವ ಬದಲು ತಮ್ಮಲ್ಲಿರುವ ಪ್ರತಿಭಯನ್ನು ಪ್ರದರ್ಶಿಸಿ ವೀಕ್ಷಕರಿಗೆ ಮನರಂಜಿಸಬೇಕು. ಸೋಲೆ ಗೆಲುವಿನ ಸೋಪಾನ ಎಂದು ಹೇಳಿದರು.
ಗ್ರಾಮೀಣ ಕ್ರೀಡೆ ಖೋ ಖೋ ಇಡಿ ದೇಶದಲ್ಲಿದೆ. ರಾಮಗಿರಿ ಗ್ರಾಮದ ಯುವಕರು ಏರ್ಪಡಿಸಿರುವ ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿಗೆ ಗ್ರಾಮದ ಹಿರಿಯರು ಸಾಥ್ ನೀಡಿರುವುದು ಸಂತೋಷದ ವಿಚಾರ. ಕ್ರೀಡೆಯಲ್ಲಿ ನೀತಿ ನಿಯಮಗಳನ್ನು ಕ್ರೀಡಾಪಟುಗಳು ತಪ್ಪದೆ ಪಾಲಿಸಬೇಕು ಎಂದು ತಿಳಿಸಿದರು.
ರಾಮಗಿರಿ ಗ್ರಾಮದ ಹಿರಿಯ ಮುಖಂಡರುಗಳಾದ ಜೆ.ರಾಮಪ್ಪ, ಕುಮಾರ್, ರಾಜು, ಬಸವರಾಜ್, ಷಣ್ಮುಖಪ್ಪ, ಸಿದ್ದೇಶ್, ನಾಗರಾಜ್, ಚಂದ್ರಮೌಳಿ, ತಿಪ್ಪೇಶ್, ಮಾರುತಿ, ರಾಜಣ್ಣ ಇನ್ನು ಮುಂತಾದವರು ಈ ಸಂದರ್ಭದಲ್ಲಿದ್ದರು.
ರಾಜ್ಯದ ನಾನಾ ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸಿದ್ದರು.
ಚಿತ್ರದುರ್ಗ: ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ ಹಿರಿಯೂರಿನ ವಾಣಿವಿಲಾಸ ಸಾಗರ ಹಾಗೂ ಸೂಳೆಕೆರೆಯಿಂದ ನೀರು ತರುವ ಪೈಪ್‍ಲೈನ್ ಯೋಜನೆ ಆರಂಭಗೊಂಡಿದೆ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹೇಳಿದರು.
ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 77 ಲಕ್ಷ ರೂ.ವೆಚ್ಚದ ಕುಡಿಯುವ ನೀರಿನ ಪೈಪ್‍ಲೈನ್ ಕಾಮಗಾರಿಗೆ ಭಾನುವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ವಿವಿ.ಸಾಗರದಿಂದ ಕುಡಿಯುವ ನೀರು ತರುವುದಕ್ಕಾಗಿ ಗಟ್ಟಿಹೊಸಳ್ಳಿ ಬಳಿ ಗುಡ್ಡದ ಮೇಲೆ ಎಪ್ಪತ್ತು ಕೋಟಿ ರೂ.ವೆಚ್ಚದಲ್ಲಿ ಫಿಲ್ಟರ್ ಅಳವಡಿಸಲಾಗಿದೆ. ತಾಲ್ಲೂಕಿನ ಎಲ್ಲಾ ಊರುಗಳಿಗೂ ಮನೆ ಮನೆಗೆ 2051 ರವರೆಗೆ ದಿನದ 24 ಗಂಟೆಯೂ ಶುದ್ದ ಹಾಗೂ ಗುಣಮಟ್ಟದ ನೀರು ಪೂರೈಕೆ ಮಾಡಲಾಗುವುದು. ಇನ್ನು 25 ವರ್ಷಗಳ ಕಾಲ ರೈತರಿಗೆ ದಿನಕ್ಕೆ ಏಳು ಗಂಟೆ ವಿದ್ಯುತ್ ನೀಡಲಾಗುವುದು. ಕನಕದಾಸರ ಹೆಸರಿನಲ್ಲಿ ವಸತಿ ಶಾಲೆ ತೆರೆಯಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಹತ್ತು ಕೋಟಿ ರೂ.ನೀಡಲು ಸರ್ಕಾರ ಒಪ್ಪಿದೆ. ಅದಕ್ಕಾಗಿ ಹತ್ತು ಎಕರೆ ಜಮೀನನ್ನು ಸರ್ಕಾರದ ಹೆಸರಿಗೆ ಬರೆಯಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾಗಿದೆ ಎಷ್ಟೋ ಶಾಸಕರುಗಳು ಬಂದು ಹೋಗಿದ್ದಾರೆ. ಯಾರು ಇಂತಹ ಅಭಿವೃದ್ದಿ ಮಾಡಿಲ್ಲ. ನೀರು, ರಸ್ತೆ, ಶಾಲೆ, ಕೆರೆ ಕಟ್ಟೆ, ಚೆಕ್‍ಡ್ಯಾಂಗಳ ನಿರ್ಮಾಣ ಎಲ್ಲವೂ ಆಗಿದೆ. ಮತದಾರರ ಆಶೀರ್ವಾದವೇ ನನಗೆ ಶ್ರೀರಕ್ಷೆಯಾಗಿರಲಿ ಎಂದು ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದರು.
ದುಮ್ಮಿ ಗ್ರಾಮದ ಮಲದಪ್ಪ ಮೇಷ್ಟ್ರು, ಗೌಡ್ರು ಬಸವಂತಪ್ಪ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಂಜಿನಪ್ಪ, ಅಣ್ಣಪ್ಪ, ದ್ಯಾಮಣ್ಣ, ಶಿವಕುಮಾರ್ ಹಾಗೂ ಹಿರಿಯರು ಈ ಸಂದರ್ಭದಲ್ಲಿದ್ದರು.
ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಒಂದು ಕೋಟಿ 11 ಲಕ್ಷ ರೂ.ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್‍ಲೈನ್ ಕಾಮಗಾರಿಗೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಭಾನುವಾರ ಭೂಮಿಪೂಜೆ ಸಲ್ಲಿಸಿದರು.
ಕುಡಿಯುವ ನೀರಿನ ಪೈಪ್‍ಲೈನ್ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ಎಂ.ಚಂದ್ರಪ್ಪ ಸೂಳೆಕೆರೆಯಿಂದ ನೀರು ತಂದು ಪ್ರತಿ ಮನೆ ಮನೆಗೆ ಪೂರೈಸುವ ಯೋಜನೆ ಈಗಾಗಲೆ ಮಂಜೂರಾಗಿದೆ. ಶುದ್ದವಾದ ಫಿಲ್ಟರ್ ನೀರನ್ನು ತಾಲ್ಲೂಕಿನ ಪ್ರತಿ ಗ್ರಾಮದ ಜನರು ಕುಡಿಯಲಿ ಎನ್ನುವುದು ಈ ಯೋಜನೆಯ ಉದ್ದೇಶ. ಹದಿಮೂರು ಕೋಟಿ ರೂ.ವೆಚ್ಚದಲ್ಲಿ ಕೋಟೆಹಾಳ್‍ವರೆಗೆ ಸಿ.ಸಿ.ರಸ್ತೆ ಮಾಡಿಸಿದ್ದೇನೆ. ಸಾರ್ವಜನಿಕರ ಬದುಕು, ಕುಂದು ಕೊರತೆ, ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಕ್ಷೇತ್ರದ ಜನರ ಕೆಲಸ ಮಾಡುತ್ತಿದ್ದೇನೆ. ಯಾರ ಹತ್ತಿರವೂ ಹೇಳಿಸಿಕೊಳ್ಳುವುದಿಲ್ಲ. ಅದಕ್ಕಾಗಿಯೇ ನಾನು ಕಳೆದ 29 ವರ್ಷಗಳಿಂದಲೂ ಶಾಸಕನಾಗಿದ್ದೇನೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸವಿತ, ಸದಸ್ಯೆ ಶ್ರೀಮತಿ ಲತ, ಗ್ರಾಮದ ಹಿರಿಯ ಮುಖಂಡ ನಾಗರಾಜ್ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.