ಬೆಳಗಾವಿ: ರಾಜ್ಯದಲ್ಲಿ ಈಗಾಗಲೇ ಮಳೆಯ ಅಭಾವದಿಂದ ರೈತರು ಸಾಕಷ್ಟು ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಮಳೆ ಇಲ್ಲದಂತೆ ಬೆಳೆ ನೆಲ ಕಚ್ಚುತ್ತಿದೆ. ಹೀಗಿರುವಾಗ ವಿದ್ಯುತ್ ಅಭಾವ ಬೇರೆ ಸೃಷ್ಟಿಯಾಗಿದೆ. ಇದರಿಂದಾಗಿ ರೈತರು ಮತ್ತಷ್ಟು ಕಂಗಲಾಗಿದ್ದಾರೆ. ಇದರ ಮೇಲೆ ಮತ್ತೊಂದು ಶಾಕ್ ನೀಡಿದೆ ಸರ್ಕಾರ.
ಈಗಾಗಲೇ ಕಡಿತಗೊಳ್ಳುತ್ತಿರುವ ವಿದ್ಯುತ್ ನಿಂದಾಗಿಯೇ ಸಮಸ್ಯೆ ಹಲವು ಇದೆ. ಹೀಗಿರುವಾಗ ವಾರದಲ್ಲಿ ಒಂದು ದಿನ ಪೂರ್ತಿಯಾಗಿ ವಿದ್ಯುತ್ ಕಡಿತ ಮಾಡುವ ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಈ ಸಂಬಂಧ ಮಾತನಾಡಿರುವ ಶಾಸಕ ಲಕ್ಷ್ಮಣ ಸವದಿ, ಒಂದು ದಿನ ಪೂರ್ತಿ ವಿದ್ಯುತ್ ಕಡಿತಗೊಳಿಸುವ ಪ್ಲ್ಯಾನ್ ನಡೆದಿದೆ. ಇದಕ್ಕೆ ರೈತರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಬೇಸಿಗೆ ಕಾಲದಲ್ಲಿ ನೀರು ಉಳಿವಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಮಳೆ ಬೆಳೆ ಸರಿಯಾಗಿ ಇದ್ದರೆ ರೈತ ಇದಕ್ಕೆಲ್ಲ ಚಿಂತೆ ಮಾಡುವಂತೆ ಇರಲಿಲ್ಲ. ಈಗ ಮಳೆಯೂ ಇಲ್ಲ, ಬೆಳೆಯೂ ಇಲ್ಲ. ಮುಂದಿನ ದಿನಗಳಲ್ಲಿ ಹೇಗಪ್ಪ ಎಂಬ ಚಿಂತೆಯಾಗಿದೆ. ಇತ್ತ ಸರ್ಕಾರ ಕೂಡ ಪರಿಹಾರದ ಬಗ್ಗೆ ಸರಿಯಾದ ನಿರ್ಧಾರ ಮಾಡಿಲ್ಲ. ಹೀಗಿರುವಾಗ ಈಗ ಲೋಡ್ ಶೆಡ್ಡಿಂಗ್ ಎಂದರೆ ರೈತನ ಬದುಕು ಮತ್ತಷ್ಟು ದುಸ್ತರವಾಗದೆ ಇರುತ್ತದೆಯೇ..? ಲಕ್ಷ್ಮಣ ಸವದಿ ಹೇಳಿದ ಮಾತಿಗೆ, ಕೃಷ್ಣಾ ನದಿ ದಂಡೆಯ ರೈತರು ಅಕ್ಷರಶಃ ಆತಂಕಕ್ಕೀಡಾಗಿದ್ದಾರೆ.