ಸ್ವಂತ ಮನೆ ಕಟ್ಟುವ ಕನಸು ಕಾಣುತ್ತಿರುವವರಿಗೆ ಕಟ್ಟಡ ನಿರ್ಮಾಣ ವೆಚ್ಚ ಮತ್ತಷ್ಟು ಹೆಚ್ಚುವ ಸಾಧ್ಯತೆ ಎದುರಾಗಿದೆ. ಎಂ ಸ್ಯಾಂಡ್, ಪಿ ಸ್ಯಾಂಡ್, ಜಲ್ಲಿ ಹಾಗೂ ವೆಟ್ ಮಿಕ್ಸ್ ಸೇರಿದಂತೆ ಪ್ರಮುಖ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ಕಳೆದ ಒಂದು ವಾರದಲ್ಲಿ ಏರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಚಾರ ಲಾರಿ ಮಾಲೀಕರು ಮತ್ತು ಕ್ರಷರ್ ಮಾಲೀಕರ ನಡುವಿನ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
ಈ ಬೆಲೆ ಏರಿಕೆಯನ್ನು ಖಂಡಿಸಿ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಕರಕಲಘಟ್ಟ ಸಮೀಪದ ಮುತ್ತುರಾಯಸ್ವಾಮಿ ದೇವಾಲಯದ ಬಳಿ ನೂರಾರು ಲಾರಿ ಮಾಲೀಕರು ಲಾರಿಗಳನ್ನು ನಿಲ್ಲಿಸಿ ಮೌನ ಪ್ರತಿಭಟನೆ ನಡೆಸಿದರು. ತಮಿಳುನಾಡಿನಿಂದ ಕಟ್ಟಡ ಸಾಮಗ್ರಿಗಳ ಪೂರೈಕೆ ಕಡಿಮೆಯಾದ ನೆಪದಲ್ಲಿ ಸ್ಥಳೀಯ ಕ್ರಷರ್ ಮಾಲೀಕರು ಏಕಾಏಕಿ ಬೆಲೆಗಳನ್ನು ಹೆಚ್ಚಿಸಿದ್ದಾರೆ ಎಂದು ಅವರು ಆರೋಪಿಸಿದರು.

ಲಾರಿ ಮಾಲೀಕರ ಮಾಹಿತಿ ಪ್ರಕಾರ, ಕಳೆದ ವಾರ ಟನ್ಗೆ ₹600 ಇದ್ದ ಸಿಂಗಲ್ ವಾಶ್ ಎಂ ಸ್ಯಾಂಡ್ ಬೆಲೆ ಈಗ ₹1,200ಕ್ಕೆ ಏರಿಕೆಯಾಗಿದೆ. ಪ್ರೀಮಿಯಂ ಎಂ ಸ್ಯಾಂಡ್ ₹700ರಿಂದ ₹1,300ಕ್ಕೆ, ಬ್ಲಾಕ್ ವರ್ಕ್ ಎಂ ಸ್ಯಾಂಡ್ ₹800ರಿಂದ ₹1,400ಕ್ಕೆ, ಪ್ಲಾಸ್ಟರಿಂಗ್ ಎಂ ಸ್ಯಾಂಡ್ ₹900ರಿಂದ ₹1,500ಕ್ಕೆ ಹಾಗೂ ಪ್ರೀಮಿಯಂ ಪ್ಲಾಸ್ಟರಿಂಗ್ ಎಂ ಸ್ಯಾಂಡ್ ₹1,000ರಿಂದ ₹1,600ಕ್ಕೆ ಏರಿಕೆಯಾಗಿದೆ ಎಂದು ಆರೋಪಿಸಲಾಗಿದೆ. ಜೊತೆಗೆ ವೆಟ್ ಮಿಕ್ಸ್ ದರವೂ ಟನ್ಗೆ ₹400ರಿಂದ ₹600ಕ್ಕೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಈ ದರ ಏರಿಕೆಯಿಂದ ಲಾರಿ ಉದ್ಯಮಕ್ಕೂ ಹೊಡೆತ ಬಿದ್ದಿದ್ದು, ಮನೆ ನಿರ್ಮಾಣದ ವೆಚ್ಚ ಸಾಮಾನ್ಯ ಜನರಿಗೆ ಮತ್ತಷ್ಟು ಹೊರೆಯಾಗಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಎಲ್ಲ ಆರೋಪಗಳನ್ನು ಕ್ರಷರ್ ಮಾಲೀಕರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಬೆಲೆ ಏರಿಕೆಯ ನೆಪ ಹೇಳಿ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಸರ್ಕಾರದ ನಿಯಮದಂತೆ ಕ್ರಷರ್ ಉತ್ಪನ್ನ ಸಾಗಿಸುವ ಪ್ರತಿಯೊಂದು ವಾಹನಕ್ಕೂ ಜಿಪಿಎಸ್ ಟ್ರ್ಯಾಕಿಂಗ್ ಹಾಗೂ ಪರವಾನಗಿ ಕಡ್ಡಾಯಗೊಳಿಸಲಾಗಿದೆ. ಈ ನಿಯಮಗಳನ್ನು ಪಾಲಿಸದ ಲಾರಿಗಳಿಗೆ ಉತ್ಪನ್ನ ಪೂರೈಕೆ ಮಾಡದಿರುವುದೇ ಪ್ರತಿಭಟನೆಗೆ ನಿಜವಾದ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದರ ಜೊತೆಗೆ, ಕೆಲವು ಲಾರಿ ಮಾಲೀಕರು ಕ್ರಷರ್ ಉತ್ಪನ್ನಗಳನ್ನು ಟನ್ ಲೆಕ್ಕದಲ್ಲಿ ಖರೀದಿಸಿ, ಗ್ರಾಹಕರಿಗೆ ಲೋಡ್ ಲೆಕ್ಕದಲ್ಲಿ ಮಾರಾಟ ಮಾಡುವ ಮೂಲಕ ಅಕ್ರಮ ಲಾಭ ಗಳಿಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಕ್ರಷರ್ ಮಾಲೀಕರು ಮಾಡಿದ್ದಾರೆ.ಒಂದೆಡೆ ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆಯ ಆರೋಪ, ಮತ್ತೊಂದೆಡೆ ನಿಯಮ ಪಾಲನೆ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಲಾರಿ ಹಾಗೂ ಕ್ರಷರ್ ಮಾಲೀಕರ ನಡುವಿನ ಸಂಘರ್ಷ ತೀವ್ರಗೊಂಡಿದೆ. ಈ ವಿವಾದದ ನೇರ ಪರಿಣಾಮ ಮನೆ ನಿರ್ಮಾಣಕ್ಕೆ ಮುಂದಾಗಿರುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮೇಲಾಗುವ ಸಾಧ್ಯತೆ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಶೀಘ್ರ ಪರಿಹಾರ ಕಂಡುಕೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.










