ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲು ಬಹಳ ಸಮಯವೇನು ಇಲ್ಲ. ಆದರೆ ಈ ಮಧ್ಯೆ ಅಭ್ಯರ್ಥಿಗಳ ಪಟ್ಟಿ ಕೂಡ ಬೆಳೆಯುತ್ತಿದೆ. ಯಾರ ಪಾಲಾಗಲಿದೆ ಅಧ್ಯಕ್ಷ ಸ್ಥಾನ ಎಂಬ ಕುತೂಹಲ ಸಹಜವಾಗಿಯೇ ಹುಟ್ಟಿಕೊಂಡಿದೆ. ಶಶಿ ತರೂರ್ ಮತ್ತು ಗೆಹ್ಲೋಟ್ ನಡುವೆ ಇದ್ದ ಸ್ಪರ್ಧೆ ಇದೀಗ ಮಲ್ಲಿಕಾರ್ಜುನ್ ಖರ್ಗೆ, ದಿಗ್ವಿಜಯ್ ಸಿಂಗ್ ಕೂಡ ಸೇರಿ ದೊಡ್ಡದಾಗುತ್ತಾ ಹೋಗುತ್ತಿದೆ. ಆದರೆ ಮೂಲಗಳ ಪ್ರಕಾರ ಗೆಹ್ಲೋಟ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದ್ದು, ಮಲ್ಲಿಕಾರ್ಜುನ್ ಖರ್ಗೆ ಕಡೆಗೆ ಬಹುತೇಕ ಒಲವಿದೆ ಎನ್ನಲಾಗುತ್ತಿದೆ.
ಅಶೋಕ್ ಗೆಹ್ಲೋಟ್ ಸ್ಪರ್ಧೆಯನ್ನು ರಾಜಸ್ಥಾನದಲ್ಲಿಯೇ ವಿರೋಧಿಸಲಾಗಿತ್ತು. ಅವರ ಸ್ಪರ್ಧೆ ವಿರೋಧಿಸಿ ಸುಮಾರು 90ಕ್ಕೂ ಹೆಚ್ಚು ಶಾಸಕರು ಬಂಡಾಯವೆದ್ದಿದ್ದರು. ಇದರ ನಡುವೆ ಇನ್ನೇನು ಸಿಎಂ ಸ್ಥಾನಕ್ಕೆ ಗೆಹ್ಲೋಟ್ ರಾಜೀನಾಮೆ ಸಲ್ಲಿಸುತ್ತಾರೆ, ಅಧ್ಯಕ್ಷೀಯ ಚುನವಾಣೆಯಲ್ಲಿ ಭಾಗವಹಿಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಗೆಹ್ಲೋಟ್ ಉಲ್ಟಾ ಹೊಡೆದಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲ್ಲ ಎಂದಿದ್ದಾರೆ.
ಗೆಹ್ಲೋಟ್ ಹಿಂದೆ ಸರಿದ ಕಾರಣ ಇನ್ನಿಬ್ಬರ ಹೆಸರನ್ನು ಕಾಂಗ್ರೆಸ್ ಸೂಚಿಸಲೇಬೇಕಾಗಿತ್ತು. ಅದರಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ದಿಗ್ವಿಜಯ್ ಸಿಂಗ್ ಹೆಸರನ್ನು ಸೂಚಿಸಿದೆ. ಅಧ್ಯಕ್ಷ ಚುನಾವಣೆ ವಿಚಾರದಲ್ಲಿ ರಾಜಕೀಯ ಡ್ರಾಮಾವೇ ನಡೆದಿದೆ. ಒಂದು ಕಡೆ ಸೋನಿಯಾ ಗಾಂಧಿಗೆ ಗೆಹ್ಲೋಟ್ ಕಡೆ ಒಲವಿದ್ದರೆ ಅತ್ತ ರಾಹುಲ್ ಗಾಂಧಿಗೆ ಸಚಿನ್ ಪೈಲೆಟ್ ಕಡೆ ಒಲವಿತ್ತು. ಗೆಹ್ಲೋಟ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಆ ಸ್ಥಾನದಲ್ಲಿ ಪೈಲೆಟ್ ಕೂರಿಸುವ ಫ್ಲ್ಯಾನ್ ಆಗಿತ್ತು. ಆದರೆ ಗೆಹ್ಲೋಟ್ ಗೆ ಪೈಲೆಟ್ ಸಿಎಂ ಆಗುವುದು ಇಷ್ಟವಿರಲಿಲ್ಲ. ಹೀಗಾಗಿ ಸಿಎಂ ಆಗಿದ್ದುಕೊಂಡೆ ಅಧ್ಯಕ್ಷರಾಗುವ ಯೋಜನೆಯಲ್ಲಿದ್ದರು. ಆದರೆ ಕಾಂಗ್ರೆಸ್ ನ ಒಬ್ಬರಿಗೆ ಒಂದೇ ಹುದ್ದೆ ಇದಕ್ಕೆ ಅಡ್ಡಿಯಾಗಿದೆ.