ಕಲಬುರಗಿ; ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾವಿತ್ತು. ರೈಲ್ವೆ ಇಲಾಖೆಯ ಪರೀಕ್ಷೆಯಲ್ಲೂ ಮಾಂಗಲ್ಯದ ವಿಚಾರ ಸದ್ದು ಮಾಡಿತ್ತು. ಈ ಎಲ್ಲಾ ವಿಚಾರಗಳು ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಪರೀಕ್ಷೆಯಲ್ಲಿ ಜನಿವಾರ ತೆಗೆಸಬಾರದು ಎಂದು ಸರ್ಕಾರವೇ ಆದೇಶ ನೀಡಿತ್ತು. ಆದರೂ ಮತ್ತೆ ಇಂದು ನೀಟ್ ಪರೀಕ್ಷೆಯಲ್ಲೂ ಜನಿವಾರ ತೆಗೆಸಿ ಪರೀಕ್ಷೆ ಬರೆಸಲಾಗಿದೆ.
ಇಂದು ರಾಜ್ಯಾದ್ಯಂತ ನೀಟ್ ಪರೀಕ್ಷೆ ನಡೆದಿದೆ. ಕಲಬುರಗಿ ನಗರದ ಸೆಂಟ್ ಮೇರಿ ಶಾಲೆಯಲ್ಲಿ ಇಂದು ನೀಟ್ ಪರೀಕ್ಷೆ ನಡೆಸಲಾಗಿದೆ. ಸೆಂಟ್ ಮೇರಿ ಶಾಲೆಯಲ್ಲಿ ಶ್ರೀಪಾದ್ ಪಾಟೀಲ್ ಎಂಬ ವಿದ್ಯಾರ್ಥಿಯೂ ಪರೀಕ್ಷೆ ಬರೆದಿದ್ದಾರೆ. ಈ ವೇಳೆ ಶ್ರೀಪಾದ್ ಪಾಟೀಲ್ ಜನಿವಾರ ಹಾಕಿದ್ದರು. ಆದರೆ ಪರೀಕ್ಷೆ ಬರೆಯುವುದಕ್ಕೂ ಮುನ್ನ ಜನಿವಾರ ತೆಗೆಸಿ, ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ತಿಳಿದ ಕೂಡಲೇ ಬ್ರಾಹ್ಮಣ ಸಮುದಾಯದವರು ಇದನ್ನು ಖಂಡಿಸಿದ್ದಾರೆ.
ಸೆಂಟ್ ಮೇರಿ ಶಾಲೆಯ ಆವರಣಕ್ಕೆ ಧಾವಿಸಿ ಪ್ರತಿಭಟನೆ ನಡೆಸಿದ್ದಾರೆ. ಸನಾತನ ಸಂಸ್ಕೃತಿಗೆ ಪರೀಕ್ಷೆ ನೆಪದಲ್ಲಿ ಅವಮಾನ ಮಾಡುವುದನ್ನು ಬಿಡಬೇಕು. ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹ ಮಾಡಿದೆ. ಪರೀಕ್ಷೆ ಬರೆಯುವುದಕ್ಕೆ ಕಿವಿಯೋಲೆ, ಬಳೆ, ಸರ, ಮೂಗುತಿಗೆ ಅವಕಾಶ ಇರಲಿಲ್ಲ. ಜಡೆ ಬಿಲ್ಲೆ, ಹೈಹೀಲ್ ಚಪ್ಪಲಿಯನ್ನು ನಿಷೇಧ ಮಾಡಲಾಗಿತ್ತು. ಪುರುಷ ವಿದ್ಯಾರ್ಥಿಗಳು ದೊಡ್ಡ ತೋಳಿನ ಶರ್ಟ್, ಕಾಲರ್ ಇರುವ ಶರ್ಟ್, ಶೂ ಹಾಗೂ ಸಾಕ್ಸ್ ಕೂಡ ಹಾಕುವಂತಿರಲಿಲ್ಲ. ಆದರೆ ಈ ನಿಯಮದ ಜೊತೆಗೆ ಜನಿವಾರವನ್ನು ಹಾಕಿದ ವಿದ್ಯಾರ್ಥಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಅದನ್ನ ತೆಗೆಸಿ ಪರೀಕ್ಷೆ ಬರೆಸಿದ್ದಾರೆ.

