ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ಬಳಿಕ ಸರ್ಕಾರಿ ನೌಕರರಿಗೆ ಒಂದರ ಮೇಲೊಂದು ಸಿಹಿ ಸುದ್ದಿ ನೀಡುತ್ತಿದೆ. ನಿನ್ನೆಯಷ್ಟೇ ತುಟ್ಟಿಭತ್ಯೆ ಹೆಚ್ಚಳ ಮಾಡಿದ್ದ ಸರ್ಕಾರ ಇದೀಗ ವರ್ಗಾವಣೆಯ ವಿಚಾರದಲ್ಲೂ ಸಿಹಿ ಸುದ್ದಿ ನೀಡಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ.) ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವಾ ನಿಯಮಗಳು-1) ಹೇಮಲತ ಜಿ. ಈ ಕುರಿತು ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಆದೇಶ ಸಂಖ್ಯೆ ದಿನಾಂಕ 7/6/2013ರ ಉಲ್ಲೇಖಿಸಿ ಈ ಆದೇಶ ಹೊರಡಿಸಲಾಗಿದೆ. 2023-24ನೇ ಸಾಲಿನಲ್ಲಿ ಮಾಡುವ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿಗಳು ಎಂಬ ವಿಷಯವನ್ನು ಈ ಆದೇಶ ಒಳಗೊಂಡಿದೆ.
ಸರ್ಕಾರಿ ಆದೇಶ ಸಂಖ್ಯೆ 30/5/2023ರಂತೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ಆದೇಶದಲ್ಲಿ ನಮೂದಿಸಿರುವ ಷರತ್ತುಗಳಿಗೊಳಪಟ್ಟು 2023-24ನೇ ಸಾಲಿಗೆ ಗ್ರೂಪ್-ಎ, ಮತ್ತು ಗ್ರೂಪ್-ಡಿ ವರ್ಗದ ಅಧಿಕಾರಿ/ ನೌಕರರಿಗೆ ಅನ್ವಯವಾಗುವಂತೆ ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇಕಡಾ 6 ರಷ್ಟನ್ನು ಮೀರದಂತೆ ದಿನಾಂಕ 01/06/2023 ರಿಂದ ದಿನಾಂಕ 15/06/2023ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖೆ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ ಎಂದು ತಿಳಿಸಿದೆ.