ಬೆಂಗಳೂರು: ಗೋಲ್ಡ್ ರೇಟ್ ದಿನೇ ದಿನೇ ಜಾಸ್ತಿ ಆಗ್ತಾ ಇರೋದಕ್ಕೋ ಏನೋ ಚಿನ್ನದ ಮೇಲೆಯೇ ವಂಚನೆ ಕೇಸುಗಳು ದಾಖಲಾಗುತ್ತಿವೆ. ಇತ್ತೀಚೆಗೆ ವರ್ತೂರು ಪ್ರಕಾಶ್ ಅವರ ಆಪ್ತೆಯಿಂದ ಕೋಟಿ ಕೋಟಿ ಚಿನ್ನದ ವ್ಯಾಪಾರಿಗೆ ವಂಚನೆ ಕೇಸ್ ಬೆನ್ನಲ್ಲೇ ಇದೀಗ ಡಿಕೆ ಸುರೇಶ್ ತಂಗಿ ಅಂತ ಹೇಳಿಕೊಂಡು ಕೋಟಿ ಕೋಟಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಚಂದ್ರಾ ಲೇಔಟ್ ನಲ್ಲಿ ವಾರಾಹಿ ಎಂಬ ಚಿನ್ನದ ಮಳಿಗೆ ಇದೆ. ವನಿತಾ ಐತಾಳ್ ಎಂಬುವವರು ಇದರ ಮಾಲೀಕರು. ಈ ಜ್ಯುವೆಲ್ಲರಿ ಶಾಪ್ ಗೆ ಐಶ್ಚರ್ಯ ಗೌಡ ಅಲಿಯಾಸ್ ನವ್ಯಶ್ರೀ ಎಂಬುವವರು 9 ಕೋಟಿ 82 ಲಕ್ಷ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಐಶ್ಚರ್ಯಾ, ತಾನು ಡಿಕೆ ಸುರೇಶ್ ತಂಗಿ ಎಂದು ನಂಬಿಸಿದ್ದಾರೆ.
ಈ ಸಂಬಂಧ ಐಶ್ವರ್ಯಾ ಹಾಗೂ ನಟ ಧರ್ಮ ಅವರ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಕಳೆದ 2023ರಿಂದ 2024ರ ಏಪ್ರಿಲ್ ವರೆಗೂ ಐಶ್ಚರ್ಯಾ ಹಂತ ಹಂತವಾಗಿ ಚಿನ್ನವನ್ನು ಪಡೆದಿದ್ದಾರೆ. ಹಣ ಕೇಳಿದರೆ ಡಿಕೆ ಸುರೇಶ್ ಅವರಿಂದ ಕರೆ ಮಾಡಿಸಿ ಕಾಲಾವಕಾಶ ಕೋರಿದ್ದಾರೆ. ಒಂಭತ್ತು ಕೋಟಿ ಮೌಲ್ಯದ ಚಿನ್ನ ಖರೀದಿ ಮಾಡಿ ವಂಚನೆ ಮಾಡಲಾಗಿದೆ ಎಂದು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.
ಹಾಗೇ ಡಿಕೆ ಸುರೇಶ್ ಅವರ ಧ್ವನಿಯಲ್ಲಿ ನಟ ಧರ್ಮ ಅವರಿಂದ ಕರೆ ಮಾಡಿಸಲಾಗಿದೆ. ಧರ್ಮ ಎನ್ನುವವರು ಕೊಲೆ ಮಾಡಿಸೋದಾಗಿ ಬೆದರಿಕೆ ಹಾಕಿದ್ದಾರೆಂದು ಎಫ್ಐಆರ್ ನಲ್ಲಿ ದಾಖಲಿಸಿದ್ದು, ಐಶ್ವರ್ಯಾ ಗೌಡ, ಪತಿ ಹರೀಶ್ ಕೆ.ಎನ್ ಹಾಗೂ ಸಿನಿಮಾ ನಟ ಧರ್ಮ ವಿರುದ್ಧ ಎಫ್ಐಆರ್ ದಾಖಲಾಗಿದೆ.