ಕಳೆದ ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಹಾಗೂ ಎಡಿಜಿಪಿ ಚಂದ್ರಶೇಖರ್ ನಡುವೆ ಮಾತಿನ ಯುದ್ಧ, ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿದ್ದವು. ಇದೀಗ ಎಡಿಜಿಪಿ ಚಂದ್ರಶೇಖರ್, ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ. ನನಗೆ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದೆ. ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಚಂದ್ರಶೇಖರ್ ದೂರು ನೀಡಿದ್ದಾರೆ. ಎಡಿಜಿಪಿ ದೂರಿನ ಆಧಾರದ ಮೇಲೆ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಸುರೇಶ್ ಬಾಬು ವಿರುದ್ಧ ದೂರು ದಾಖಲಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ನನಗೆ ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಎಡಿಜಿಪಿ ನೀಡಿದ ದೂರಿನಲ್ಲಿ ಈ ಕೆಳಕಂಡಂತೆ ಇದೆ: ‘ನಾನು ಐಎಸ್ಡಿ ಹಾಗೂ ಗಣಿಗಾರಿಕೆಗೆ ಸಂಬಂಧಿಸಿದ ಎಸ್ಐಟಿಯ ಎಡಿಜಿಪಿ ಆಗಿದ್ದೇನೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮೇಲೆ 2014ರಲ್ಲಿ ದಾಖಲಾದ ಪ್ರಕತಣದ ತನಿಖೆಯನ್ನು ಕೈಗೊಂಡಿದ್ದೇನೆ. ತನಿಖೆಯ ವೇಳೆ ಅವರ ಪ್ರಕರಣದ ವಿರುದ್ಧ ಹೆಚ್ಚುವರಿ ಸಾಕ್ಷಿಗಳು ದೊರೆತಿದ್ದವು. ಹೀಗಾಗಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ನಾನು, ರಾಜ್ಯಪಾಲರ ಅನುಮತಿ ಕೋರಿದ್ದೆ. ಅನುಮತಿಯನ್ನು ಕೋರಿದ್ದ ಕಾರಣಕ್ಕಾಗಿ ಕುಮಾರಸ್ವಾಮಿ ಅವರು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಎಡಿಜಿಪಿ ತಾವೂ ನೀಡಿದ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಹಾಗೇ ಕುಮಾರಸ್ವಾಮಿ ಅವರ ಜೊತೆಗೆ ನಿಖಿಲ್ ಕುಮಾರಸ್ವಾಮಿ, ಸುರೇಶ್ ಬಾಬು ಅವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ.