ಚಿತ್ರದುರ್ಗ : ಹಸಿ ತರಕಾರಿ, ಹಣ್ಣು, ಸೊಪ್ಪುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಸುಧಾ ತಿಳಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರು, ತೋಟಗಾರಿಕಾ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಚಿತ್ರದುರ್ಗ ಇವರುಗಳ ಸಹಯೋಗದೊಂದಿಗೆ ಜಿಲ್ಲಾ ವೀರಶೈವ ಲಿಂಗಾಯಿತ ಹೇಮರಡ್ಡಿ ಮಲ್ಲಮ್ಮ ಸಮಾಜದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಅಂತರಾಷ್ಟೀಯ ಹಣ್ಣುಗಳ ಮತ್ತು ತರಕಾರಿಗಳ ವರ್ಷಾಚರಣೆ 2021-22 ನ್ನು ಕಲ್ಲಂಗಡಿ ಹಣ್ಣು ಕತ್ತರಿಸುವ ಮೂಲಕ ವಿನೂತನವಾಗಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಂದ ಹಿಡಿದು ವೃದ್ದರವರೆಗೂ ಎಲ್ಲರೂ ಹಣ್ಣು ತರಕಾರಿ ಸೊಪ್ಪುಗಳನ್ನು ತಿನ್ನಬೇಕು. ನುಗ್ಗೆಸೊಪ್ಪಿನಲ್ಲಿ ವಿಟಮಿನ್ ಎ.ಸಿಗುತ್ತದೆ. ಟಮೋಟೋ, ಕ್ಯಾರೆಟ್, ಸೌತೆಕಾಯಿ ಸೇರಿದಂತೆ ಎಲ್ಲಾ ಬಗೆಯ ಹಸಿ ತರಕಾರಿ ಸೊಪ್ಪುಗಳನ್ನು ಬಳಸಬೇಕು.
ಉತ್ತರ ಕರ್ನಾಟಕದವರು ಹಸಿ ಸೊಪ್ಪು ತರಕಾರಿಗಳನ್ನು ಹೆಚ್ಚು ಸೇವಿಸುವುದರಿಂದ ಮಧ್ಯ ಕರ್ನಾಟಕದವರಿಗಿಂತ ಗಟ್ಟಿಮುಟ್ಟಾಗಿರುತ್ತಾರೆ. ಈರುಳ್ಳಿ ಸೇವನೆಯಿಂದ ಜೀರ್ಣಶಕ್ತಿ ಜಾಸ್ತಿಯಾಗುತ್ತದೆ.
ನಾರಿನ ಪದಾರ್ಥವುಳ್ಳ ಹಣ್ಣು, ತರಕಾರಿ, ಸೊಪ್ಪು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಲಿದೆ. ವಿವಿಧ ಬಗೆಯ ಕಾಳುಗಳನ್ನು ಹುರಿದು ಪುಡಿ ಮಾಡಿ ಗಂಜಿ ರೂಪದಲ್ಲಿ ತಯಾರಿಸಿ ಕುಡಿಯಬೇಕು. ಮೊಳಕೆ ಕಟ್ಟಿದ ಕಾಳುಗಳಿಂದ ಹೆಚ್ಚು ಪೌಷ್ಟಿಕಾಂಶ ಸಿಗುತ್ತದೆ. ಬಸಳೆ ಸೊಪ್ಪು ಸೇವನೆಯಿಂದ ಬಾಣಂತಿಯರಿಗೆ ಎದೆ ಹಾಲು ವೃದ್ದಿಯಾಗುತ್ತದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಟಿ.ತೋಟಯ್ಯ ಮಾತನಾಡಿ ಪ್ರತಿಯೊಬ್ಬರು ಆರೋಗ್ಯವಾಗಿರಬೇಕಾದರೆ ಪರಿಶುದ್ದವಾದ ಗಾಳಿ, ಖನಿಜಗಳಿಂದ ಕೂಡಿರುವ ಶುದ್ದವಾದ ನೀರು ಬೇಕು. ಪೌಷ್ಠಿಕಾಂಶವುಳ್ಳ ಹಣ್ಣು, ತರಕಾರಿ, ಸೊಪ್ಪುಗಳನ್ನು ಸೇವಿಸಬೇಕು. ರಾಸಾಯನಿಕ ಸಿಂಪಡಿಸಿದ ಆಹಾರ ಪದಾರ್ಥಗಳನ್ನು ಸೇವಿಸುತ್ತಿರುವುದರಿಂದ ಮಾನವ ಒಂದಲ್ಲ ಒಂದು ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ.
ಹಣ್ಣು, ತರಕಾರಿ, ಕಾಯಿ ಪಲ್ಯಗಳನ್ನು ಬೆಳೆಯಲು ಚಿತ್ರದುರ್ಗ ಜಿಲ್ಲೆಯಲ್ಲಿ ಹೇಳಿ ಮಾಡಿಸಿದಂತ ಭೂಮಿಯಿದೆ. ಸರ್ಕಾರವೂ ಕೂಡ ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ಕೊಡುತ್ತಿದೆ. ವೈವಿದ್ಯಮಯ ಹವಾಗುಣ ಇಲ್ಲಿನ ಮಣ್ಣಿಗಿದೆ. ಇದನ್ನು ಬಳಸಿಕೊಂಡು ಗುಣಮಟ್ಟದ ಹಣ್ಣು, ತರಕಾರಿ, ಸೊಪ್ಪುಗಳನ್ನು ಬೆಳೆಯಬಹುದು.
ಮಹಿಳೆಯರು ಅಣಬೆ ಬೆಳೆಯಲು ಮುಂದೆ ಬಂದರೆ ಇಲಾಖೆಯಿಂದ ನೆರವು ನೀಡಲಾಗುವುದು ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ ಪೌಷ್ಟಿಕಾಂಶ ಹಾಗೂ ರುಚಿಕರವಾದ ಹಣ್ಣು, ತರಕಾರಿ, ಸೊಪ್ಪುಗಳನ್ನು ಮಕ್ಕಳಿಂದ ಹಿಡಿದು ವೃದ್ದರವರೆಗೂ ಎಲ್ಲರೂ ಸೇವಿಸಬಹುದು.
ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಅತ್ಯಮೂಲ್ಯವಾದುದು. ಹೆಚ್ಚು ಬೇಡಿಕೆಯುಳ್ಳ ಹಣ್ಣು. ಆಯಾ ಕಾಲಕ್ಕೆ ಸಿಗುವ ಪ್ರತಿಯೊಂದು ಹಣ್ಣು, ತರಕಾರಿಗಳನ್ನು ತಪ್ಪದೆ ಸೇವಿಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಎಸ್.ಟಿ.ಸ್ವಾಮಿ ಮಾತನಾಡಿ ಹಣ್ಣು, ತರಕಾರಿ, ಸೊಪ್ಪು, ಕಾಳುಗಳ ಸೇವನೆ ಎಲ್ಲರಿಗೂ ಅತ್ಯವಶ್ಯಕ. ಮಹಿಳೆಯರಿಗೆ ಈ ವಿಚಾರ ತಿಳಿಸಿದರೆ ಇಡಿ ಕುಟುಂಬ ಹಾಗೂ ಅಕ್ಕಪಕ್ಕದವರಿಗೆ ಹರಡುತ್ತದೆ ಎನ್ನುವ ಉದ್ದೇಶಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವಸಹಾಯ ಸಂಘದ ಮಹಿಳೆಯರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ರಾಜ್ಯದ 35 ಜಿಲ್ಲೆಗಳಲ್ಲಿಯೂ ಅಂತರಾಷ್ಟಿçÃಯ ಹಣ್ಣುಗಳ ಮತ್ತು ತರಕಾರಿಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದರ ಮಹತ್ವ ಮಕ್ಕಳಿಗೂ ತಾಯಂದಿರು ತಿಳಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಡಿ.ಲತೀಫ್‌ಸಾಬ್ ಆರೋಗ್ಯವೇ ಭಾಗ್ಯ. ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೆ ಯಾವುದೂ ಇಲ್ಲ. ಅದಕ್ಕಾಗಿ ಪ್ರತಿಯೊಬ್ಬರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಹಣ್ಣು, ತರಕಾರಿ, ವಿವಿಧ ರೀತಿಯ ಸೊಪ್ಪುಗಳ ಸೇವನೆಯಿಂದ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ. ನಾರಿನಾಂಶವುಳ್ಳ ಆಹಾರ ಸೇವನೆ ಮುಖ್ಯ. ನಾರು ಆರೋಗ್ಯದ ತಾಯಿ ಬೇರು ಇದ್ದಂತೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಹೆಚ್.ಶ್ರೀನಿವಾಸ್, ನಾಗಿರೆಡ್ಡಿ, ಡಾ.ರಹಮತ್‌ವುಲ್ಲಾ, ಎ.ಬಿ.ಸಿ. ಮಾಲೀಕ ಅನ್ವರ್‌ಪಾಷ, ವೇದಿಕೆಯಲ್ಲಿದ್ದರು.
ಕ.ರಾ.ವಿ.ಪ.ಕಾರ್ಯದರ್ಶಿ ಸಿ.ಎನ್.ಮಹೇಶ್ ಸ್ವಾಗತಿಸಿ ವಂದಿಸಿದರು. ಟಿ.ಹನುಮಂತಪ್ಪ ನಿರೂಪಿಸಿದರು.