ಹೊಳಲ್ಕೆರೆ(ಏ.29) : ಹೊಳಲ್ಕೆರೆ ಕ್ಷೇತ್ರದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಹದಗೆಟ್ಟಿದ್ದು, ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ ದೂರಿದರು.
ತಾಲೂಕಿನ ಧುಮ್ಮಿ ಗ್ರಾಮದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಪ್ರತಿ ಬಾರಿಯೂ ಆಂಜನೇಯ ಸ್ಪರ್ಧೆ ಮಾಡುತ್ತಿದ್ದರು. ಆದರೆ, ಈ ಬಾರಿ ಕ್ಷೇತ್ರದ ಜನರ ಒತ್ತಾಯ ಮಾಡಿ ಕಣಕ್ಕೆ ಇಳಿಸಿದ್ದು, ಆಂಜನೇಯ ಅವರ ಗೆಲುವು ನಮ್ಮ ಸ್ವಾಭಿಮಾನದ ಉಳಿವು ಆಗಲಿದೆ ಎಂದರು.
ಈ ಹಿಂದೆಂದೂ ಕಾಣದ ಜನಬೆಂಬಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವ್ಯಕ್ತವಾಗಿದೆ. ಆಂಜನೇಯ ಅವರ ಗೆಲುವು ಖಚಿತವಾಗಿದ್ದು, ಮತಗಳ ಅಂತರ ದಾಖಲೆ ಆಗಬೇಕೆಂಬುದು ನಮ್ಮ ಆಸೆ.ಎಚ್.ಆಂಜನೇಯ ಅವರಂಥ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸುವುದು ಈ ಬಾರಿಯ ಚುನಾವಣೆಯಲ್ಲಿ ಅನಿವಾರ್ಯವಾಗಿದೆ. ಕ್ಷೇತ್ರದೆಲ್ಲೆಡೆ ಅವರು ಪ್ರಚಾರಕ್ಕೆ ಆಗಮಿಸಿದರೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ಕಾಂಗ್ರೆಸ್ 130 ವರ್ಷಗಳ ಇತಿಹಾಸ ಇರುವ ಪಕ್ಷ. ಕಾಂಗ್ರೆಸ್ ಮಾಡಿದ ಕಾರ್ಯಗಳನ್ನು ಪಟ್ಟಿ ಮಾಡಲು ಸಾಧ್ಯವಿಲ್ಲ. ದೇಶಕ್ಕೆ ಸ್ವಾತಂತ್ರ್ಯ, ನೀರಾವರಿ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಹೇಳಿದರು.
ಎಚ್.ಆಂಜನೇಯ ಅವರು ಹೊಳಲ್ಕೆರೆ ಕ್ಷೇತ್ರದ 38 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಿ, ಅನುಮೋದನೆ ಪಡೆಯುವಲ್ಲಿ ಶ್ರಮಿಸಿದ್ದಾರೆ. ಸಾವಿರಾರು ಕೊಳವೆಬಾವಿಗಳನ್ನು ಕೊರೆಯಿಸಿದ್ದಾರೆ. ಇದರಿಂದ ರೈತರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಕಾರಣ ಆಗಿದೆ. ಆದರೆ, ಕಳೆದ ಬಾರಿ ಆಂಜನೇಯ ಅವರ ವಿರುದ್ಧ ಪ್ರಚಾರ ನಡೆಸಿ ಗೆದ್ದ ಬಿಜೆಪಿ ಶಾಸಕ 5 ವರ್ಷ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಈ ಕುರಿತು ಎಲ್ಲೆಡೆ ಜನಾಕ್ರೋಶ ಇದ್ದು, ಕಾಂಗ್ರೆಸ್ ಪಕ್ಷಕ್ಕೆ ವರದಾನ ಆಗಿದೆ ಎಂದು ಹೇಳಿದರು.
ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಬಿಜೆಪಿ ಸರ್ಕಾರದ ದುರಾಡಳಿತ, ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸಿದ್ದಾರೆ. ಆಡಳಿತದ ಪ್ರಗತಿ ಅಂದರೆ ಶಾಸಕರು, ಮಂತ್ರಿಗಳೇ ಹೊರತು ಯಾವೊಬ್ಬ ಜನಸಾಮಾನ್ಯರಲ್ಲ ಎಂಬ ವಾತಾವರಣ ನಿರ್ಮಾಣ ಆಗಿದೆ ಎಂದು ದೂರಿದರು.
ಪರಿಣಾಮ ಬಿಜೆಪಿ ವಿರೋಧಿ ಅಲೆ ಹೆಚ್ಚಾಗಿದ್ದು, ಸರ್ವರು ಸಹ ಕಾಂಗ್ರೆಸ್ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಮಾತನಾಡಿ, ಹೊಳಲ್ಕೆರೆ ಕ್ಷೇತ್ರದಾಧ್ಯಂತ ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಮತ್ತು ಜನಪರ ಕಾಳಜಿಯನ್ನು ಮೆಚ್ಚಿ ನಿತ್ಯ ನೂರಾರು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು, ಶಾಸಕ ಚಂದ್ರಪ್ಪನ ಅಹಂಕಾರ ಮಟ್ಟಹಾಕಲು ಮೇ 10 ರಂದು ಮತದಾನ ದಿನಾಂಕಕ್ಕೆ ಜನ ಕಾಯುತ್ತಿದ್ದಾರೆ ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಬಿಜೆಪಿಯ ದುರಾಡಳಿತದಿಂದಾಗಿ ಅಭಿವೃದ್ಧಿ ನಿಂತ ನೀರಾಗಿದೆ.ನನ್ನ ಮೊದಲ ಆದ್ಯತೆ ಹೊಳಲ್ಕೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಆಗಿದ್ದು, ಜನರ ನಂಬಿಕೆಗೆ ಧಕ್ಕೆ ತರುವ ಮನುಷ್ಯ ನಾನಲ್ಲ ಎಂದರು.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದಿಂದ ಪ್ರತಿ ಕ್ಷೇತ್ರದಲ್ಲೂ ಭ್ರಷ್ಟಾಚಾರದ ಪಿಡುಗು ಜನರನ್ನು ನರಕವನ್ನಾಗಿಸಿದೆ. ಅದೇ ರೀತಿ ಭ್ರಷ್ಟಾಚಾರದಲ್ಲಿ ಮುಳುಗಿರುವ ನಮ್ಮ ಕ್ಷೇತ್ರದ ಶಾಸಕರ ದುರ್ವರ್ತನೆ ಮಿತಿಮೀರಿದೆ. ಇದನ್ನು ಕೊನೆಗಾಣಿಸಲು ಕ್ಷೇತ್ರದ ಮತದಾರರು ತುದಿಗಾಲಲ್ಲಿ ನಿಂತಿದ್ದು, ಕಾಂಗ್ರೆಸ್ ಆಡಳಿತದ ಭರವಸೆಯ ದಿನಗಳು ಸನ್ನಿಹಿತವಾಗಿದೆ. ಭವಿಷ್ಯದಲ್ಲಿ ಹೊಳಲ್ಕೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರು, ದಲಿತರು, ಅಲ್ಪಸಂಖ್ಯಾತರು ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ನಿರುದ್ಯೋಗ, ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಯಾವೊಂದು ಗುರುತರವಾದ ಕಾರ್ಯಕ್ರಮ ರೂಪಿಸಿಲ್ಲ ಎಂದು ಕಿಡಿಕಾಡಿದರು.
ಕ್ಷೇತ್ರ ಮತ್ತು ರಾಜ್ಯದ ಉದ್ಧಾರ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎಂದು ಅರಿತಿರುವ ಕ್ಷೇತ್ರದ ಪ್ರಜ್ಞಾವಂತ ಮತದಾರರು ಸ್ವಯಂ ಪ್ರೇರಿತರಾಗಿ ಈ ಬಾರಿ ಚುನಾವಣೆಯಲ್ಲಿ ನನಗೆ ಬೆಂಬಲ ನೀಡುತ್ತಿದ್ದು, ಬಿಜೆಪಿಯ ಭ್ರಷ್ಟ, ದುರಾಡಳಿತದ ಸರ್ಕಾರವನ್ನು ಕಿತ್ತುಹಾಕಲು ಸರ್ವಸನ್ನದ್ಧವಾಗಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಮೇ.13ರಿಂದ ಕಾಂಗ್ರೆಸ್ ಪಕ್ಷದ ಸುರ್ವಣ ಯುಗ ಆರಂಭವಾಗಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ, ಜಿಪಂ ಮಾಜಿ ಅಧ್ಯಕ್ಷರಾದ ಆರ್.ಶಿವಕುಮಾರ್, ಗೀತಾನಂದಿನಿಗೌಡ, ಉಪಾಧ್ಯಕ್ಷ ಗಂಗಾಧರ್, ಸದಸ್ಯ ಎಸ್.ಜೆ.ರಂಗಸ್ವಾಮಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಜರ್ ಉಲ್ಲಾಖಾನ್, ಮುಖಂಡರಾದ ಬಸವನಗೌಡ, ವೈಶಾಖ್ ಯಾದವ್, ಹನುಮಲಿ ಉಮಾಪತಿ, ಓಂಕಾರಪ್ಪ, ಶಿವಣ್ಣ ಉಪಸ್ಥಿತರಿದ್ದರು.