ತಿರುಪತಿ ತಿಮ್ಮಪ್ಪನಿಗೆ ಕೋಟ್ಯಾಂತರ ಭಕ್ತರಿದ್ದಾರೆ. ತಿಮ್ಮಪ್ಪನ ಪ್ರಸಾದ ಅಂದ್ರೆ ಅದು ಲಡ್ಡು. ತಿರುಪತಿಗೆ ಹೋದ ಭಕ್ತರೆಲ್ಲ ಪ್ರಸಾದದ ರೂಪದಲ್ಲಿ ಲಡ್ಡು ತಂದು ಹಂಚುತ್ತಿದ್ದರು. ಆದರೆ ಇತ್ತೀಚೆಗೆ ಲಡ್ಡುವಿನಲ್ಲಿ ಪ್ರಾಣಿಯ ಕೊಬ್ಬನ್ನ ಬಳಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕೇಸನ್ನ ಸಿಬಿಐ ವಹಿಸಿಕೊಂಡು ತನಿಖೆ ನಡೆಸುತ್ತಿತ್ತು. ಇದೀಗ ಆ ಕೇಸಿಗೆ ಬಿಗ್ ಟ್ವಿಸ್ಟ್ ನೀಡಿದ್ದು, ಸಿಬಿಐ ನಾಲ್ವರನ್ನು ಅರೆಸ್ಟ್ ಮಾಡಿದೆ.
ಉತ್ತರಕಾಂಡ್ ರಾಜ್ಯದ ರೂರ್ಕಿ ಬೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕ ವಿಪಿನ್ ಜೈನ್ ಮತ್ತು ಪೊಮಿಲ್ ಜೈನ್ ಪೂನಂಭಾಕ್ಕಂನ ವೈಷ್ಣವಿ ಡೈರಿಯ ಸಿಇಓ ಅಪೂರ್ವ ಬಂಧಿತ ಆರೋಪಿಗಳು. ಟೆಂಡರ್ ಪಡೆಯುವ ಹಂತದಿಂದ ಹಿಡಿದು ಪೂರೈಕೆ ಮಾಡುವ ಹಂತದವರೆಗೂ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ತುಪ್ಪ ಪೂರೈಕೆಯ ವಿಚಾರದಲ್ಲಿ ಆರೋಪಿಗಳು ಅನೇಕ ನಿಯಮಗಳನ್ನು ಉಲ್ಲಂಘಿಸಿರುವ ಆರೋಪವಿದೆ. ತನಿಖೆ ವೇಳೆ ಆರೋಪ ಕೂಡ ದೃಢವಾಗಿದ್ದು, ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ತುಪ್ಪದ ಟೆಂಡರ್ ಪಡೆಯುವುದಕ್ಕೆ ಹಲವು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಸೀಲ್ ಬಳಕೆ ಮಾಡಿದ್ದಾರೆ. ಕೆಲವು ದಾಖಲೆಗಳನ್ನೆ ತಿರುಚಿದ್ದಾರೆ. ತುಪ್ಪದ ಪೂರೈಕೆಯಲ್ಲೂ ವ್ಯತ್ಯಾಸವಾಗಿರುವುದನ್ನು ಸಿಬಿಐ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದೀಗ ವಾಪಾಸ್ ಕರ್ನಾಟಕದ ಕೆಎಂಎಫ್ ತುಪ್ಪವನ್ನೇ ಪಡೆಯುತ್ತಿದೆ.
ಈ ಹಿಂದೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಲಡ್ಡು ಬಗ್ಗೆ ಆರೋಪ ಮಾಡಿದ್ದರು. ವೈಎಸ್ಸಿಆರ್ಪಿ ಸರ್ಕಾರವು ಗುಣಮಟ್ಟವಿಲ್ಲದ ಪದಾರ್ಥಗಳು ಹಾಗೂ ಪ್ರಾಣಿ ಕೊಬ್ಬನ್ನು ಬಳಕೆ ಮಾಡಿಕೊಂಡು ಲಡ್ಡು ತಯಾರಿಸುತ್ತಿದೆ ಎಂದು ಆರೋಪಿಸಿದ್ದರು. ಈ ವಿಚಾರ ದೇಶದಾದ್ಯಂತ ಬಾರೀ ಚರ್ಚೆಗೆ ಗ್ರಾಸವಾಗಿತ್ತು.