ಚಿತ್ತೂರು : ದೇವರಿಗೆ ಪ್ರಾಣಿ ಬಲಿ ಕೊಡುವ ಪದ್ಧತಿ ಈಗಲೂ ಆಚರಣೆಯಲ್ಲಿದೆ. ಆದ್ರೆ ಪ್ರಾಣಿ ಬಲಿಗೆ ನಿರ್ಬಂಧವೂ ಇದೆ. ಆದರೂ ಜನ ತಮ್ಮ ಸಂಪ್ರದಾಯವೆಂದು ಅದನ್ನ ಮುಂದುವರೆಸಿಕೊಂಡು ಬರ್ತಿದ್ದಾರೆ. ಇದೀಗ ಪ್ರಾಣಿ ಬಲಿ ಕೊಡುವ ವೇಳೆ ನಡೆದ ಘಟನೆಯಲ್ಲಿ ಮನುಷ್ಯನನ್ನ ಬಲಿ ಕೊಟ್ಟಿರುವ ಘಟನೆ ನಡೆದಿದೆ.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲೂಕಿನ ವಲಸನಪಲ್ಲಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. 29 ವರ್ಷದ ಸುರೇಶ್ ಎಂಬಾತ ಕೃತ್ಯಕ್ಕೆ ಬಲಿಯಾಗಿದ್ದಾನೆ. ಸಹೋದರ ಸಂಬಂಧಿ ತಲೆ ಕಡಿದ ಆರೋಪಿಯಾಗಿದ್ದಾನೆ. ಸದ್ಯ ಆರೋಪಿ ಚಲಪತಿ ಪೊಲೀಸರ ವಶದಲ್ಲಿದ್ದಾನೆ.
ವಲಸನಪಲ್ಲಿಯಲ್ಲಿ ಯಲ್ಲಮ್ಮನ ಜಾತ್ರೆ ಮಾಡಲಾಗಿತ್ತು. ಈ ಜಾತ್ರೆಯಲ್ಲಿ ಗ್ರಾಮಸ್ಥರು ಮೇಕೆ ಬಲಿ ಕೊಡಲು ತಂದಿದ್ದರು. ದೇವರಿಗೆ ಪೂಜೆ ಮಾಡಿ ಮೇಕೆ ಬಲಿ ಕೊಡಲು ಸಿದ್ಧತೆ ಮಾಡಿಕೊಂಡಿದ್ದರು. ಸುರೇಶ್ ಮೇಕೆ ಹಿಡಿದುಕೊಂಡಿದ್ದರು. ಆರೋಪಿ ಚಲಪತಿ ಮೇಕೆ ಕಡಿಯಲು ಸಿದ್ಧನಾಗಿದ್ದ. ಈ ವೇಳೆ ಇಬ್ಬರ ಮಧ್ಯೆ ಚಂದಾ ವಿಚಾರಕ್ಕೆ ಜಗಳವಾಗಿದೆ. ಪಾನಮತ್ತನಾಗಿದ್ದ ಚಲಪತಿ, ಸಿಟ್ಟಿಗೆದ್ದು ಮೇಕೆ ಕಡಿಯುವ ಬದಲು ಸುರೇಶ್ ತಲೆಯನ್ನೇ ಕಡಿದಿದ್ದಾನೆ.
ಈ ಘಟನೆಯಿಂದಾಗಿ ಗ್ರಾಮಸ್ಥರು ಶಾಕ್ ಆಗಿದ್ದಾರೆ. ಸುರೇಶ್ ಕುಟುಂಬಸ್ಥರು ಮಗನನ್ನ ಕಳೆದುಕೊಂಡು ಕಂಗಲಾಗಿದ್ದಾರೆ. ಆರೋಪು ಚಲಪತಿ ಪೊಲೀಸರ ವಶದಲ್ಲಿದ್ದಾನೆ.