ಸುದ್ದಿಒನ್
ಕಳೆದ ಎರಡು ತಿಂಗಳಿನಿಂದ ಹಿಂಸಾಚಾರ, ಗಲಭೆಗಳಿಂದ ನಲುಗಿದ್ದ ಮಣಿಪುರದಲ್ಲಿ ಸಮಾಜವೇ ತಲೆ ತಗ್ಗಿಸುವಂತಹ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ನಂತರ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
https://youtu.be/f7hcVCYHZjg
ರಾಜಧಾನಿ ಇಂಫಾಲ್‌ನಿಂದ 35 ಕಿಮೀ ದೂರದಲ್ಲಿರುವ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೇ 4ರಂದು ಈ ಹೇಯ ಘಟನೆ ನಡೆದಿದೆ ಎಂದು ಆದಿವಾಸಿ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್) ಆರೋಪಿಸಿದೆ. ಈ ಘಟನೆಯ ಮೊದಲು, ಇಂಫಾಲ್ ಕಣಿವೆಯಲ್ಲಿ ಬಹುಸಂಖ್ಯಾತ ಸಮುದಾಯವಾಗಿರುವ ಮೈಥಿಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಕುಕಿ ಸಮುದಾಯಗಳ ನಡುವೆ ಘರ್ಷಣೆಗಳು ನಡೆದಿದ್ದವು.
ಏತನ್ಮಧ್ಯೆ, ಮೇ 4 ರಂದು ನಡೆದ ಈ ದುಷ್ಕೃತ್ಯಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯ ಬಗ್ಗೆ ಅನೇಕರು ತುಂಬಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಘಟನೆ ಕಾಂಗ್‌ಪಾಕ್ಸಿಯಲ್ಲಿ ನಡೆದಿಲ್ಲ, ಬೇರೆ ಪ್ರದೇಶದಲ್ಲಿ ನಡೆದಿದೆ ಎಂದು ಮಣಿಪುರ ಪೊಲೀಸರು ಹೇಳಿದ್ದಾರೆ. ಕಾಂಗ್‌ಪಾಕ್ಸಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಘಟನೆಯ ಕುರಿತು ಮಣಿಪುರ ಸಿಎಂ ಬೀರೇಂದ್ರ ಸಿಂಗ್ ತನಿಖೆಗೆ ಆದೇಶಿಸಿದ್ದಾರೆ. ಇದೇ ವೇಳೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿಯೊಂದಿಗೆ ಮಾತನಾಡಿ, ಅಪರಾಧ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಮಣಿಪುರದಲ್ಲಿ ಎಸ್‌ಟಿ ಸ್ಥಾನಮಾನಕ್ಕೆ ಆಗ್ರಹಿಸುತ್ತಿರುವ ಮೈತಿ ಸಮುದಾಯದ ಪರವಾಗಿ ಬಿಜೆಪಿ ಸರ್ಕಾರ ಕೈಗೊಂಡ ನಿರ್ಧಾರದಿಂದ ರಾಜ್ಯ ಹೊತ್ತಿ ಉರಿಯುವಂತಾಗಿತ್ತು. ಇದನ್ನು ಕುಕಿ ಸಮುದಾಯ ವಿರೋಧಿಸಿದ್ದರಿಂದ ಈ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ಹಿಂಸಾಚಾರದಲ್ಲಿ ನೂರಾರು ಜನರು ಸಾವನ್ನಪ್ಪಿದ್ದರು ಮತ್ತು ಸಾವಿರಾರು ಜನರು ನಿರಾಶ್ರಿತರಾದರು.
ಮತ್ತೊಂದೆಡೆ ಗುರುವಾರದಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲಿರುವಾಗಲೇ ಈ ಘಟನೆ ಬೆಳಕಿಗೆ ಬಂದಿದೆ. ಮಣಿಪುರದ ಹಿಂಸಾಚಾರದ ಬಗ್ಗೆ ಮಾತನಾಡದ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರತಿಪಕ್ಷಗಳು ಈಗಾಗಲೇ ಟೀಕಿಸುತ್ತಿವೆ. ಎರಡು ತಿಂಗಳಿಗೂ ಹೆಚ್ಚು ಕಾಲ ಮಣಿಪುರ ಹಿಂಸಾಚಾರದಲ್ಲಿ ನಲುಗುತ್ತಿದ್ದು, ಪ್ರಧಾನಿ ಮೌನವಾಗಿದ್ದಾರೆ. ಈ ಹಿನ್ನಲೆಯಲ್ಲಿ ಮಹಿಳೆಯರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿರುವ ವಿಡಿಯೋವೊಂದು ಬೆಳಕಿಗೆ ಬಂದಿರುವುದು ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.
ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಬುಧವಾರ ಸಂಜೆ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದ 34 ಪಕ್ಷಗಳ ಮುಖಂಡರು ತಮ್ಮ ಬೇಡಿಕೆಗಳಿಗೆ ಧ್ವನಿಗೂಡಿಸಿದರು. ಮೊದಲ ದಿನವೇ ಮಣಿಪುರದ ಪರಿಸ್ಥಿತಿ ಕುರಿತು ಪ್ರಧಾನಿ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಪ್ರಧಾನಿ ಮಾತನಾಡುತ್ತಾರಾ ? ಅಥವಾ? ಇಲ್ಲವಾ ? ಇನ್ನು ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ.